
ಭೂ ದಾಖಲೆಗಳಲ್ಲಿ ಕ್ರಾಂತಿ: ಹೊನ್ನಾವರದಲ್ಲಿ 15,57,896 ಕಡತಗಳ ಸಂರಕ್ಷಣೆ
News Details
ಭೂ ದಾಖಲೆಗಳ ಸಂರಕ್ಷಣೆ ವಿಷಯವಾಗಿ ಸರ್ಕಾರ ಮುತುವರ್ಜಿವಹಿಸಿದ್ದು, ದಾಖಲೆಗಳನ್ನು ಸಂರಕ್ಷಿಸುವಲ್ಲಿ ಹೊನ್ನಾವರ ತಾಲೂಕು ರಾಜ್ಯಕ್ಕೆ ಮಾದರಿಯಾಗಿದೆ. ಈವರೆಗೆ 15,57,896 ಕಡತವನ್ನು ಸಂರಕ್ಷಿಸಿದ ಇಲ್ಲಿನ ಅಧಿಕಾರಿ-ಸಿಬ್ಬಂದಿ ಅವೆಲ್ಲವನ್ನು ಗಣಕಿಯಂತ್ರ ವ್ಯವಸ್ಥೆಯಲ್ಲಿ ಸಿಗುವಂತೆ ಮಾಡಿದ್ದಾರೆ.
ಇಲ್ಲಿ ಕೈಬರಹ ಪಹಣಿ, ಮ್ಯುಟೇಶನ್ ವಹಿ, ಭೂ ಮಂಜೂರಾತಿ ಕಡತಗಳು, ಭೂಪರಿವರ್ತನೆ ಕಡತಗಳು, ಭೂ ಸುಧಾರಣೆ ಕಡತಗಳನ್ನು ಸ್ಕಾನ್ ಮಾಡಿ ಸಂರಕ್ಷಿಸಲಾಗಿದೆ. ಸಾರ್ವಜನಿಕರಿಗೆ ಭೂ ದಾಖಲೆಗಳು ಒಂದು ನಿರ್ಣಾಯಕ ದಾಖಲೆಯಾಗಿದ್ದು, ಅದನ್ನು ಶಾಶ್ವತವಾಗಿ ಕಾಪಾಡಿಕೊಳ್ಳುವ ಪ್ರಯತ್ನ ಮುಂದುವರೆದಿದೆ. ಸಾರ್ವಜನಿಕರಿಗೆ ಅಗತ್ಯವಿರುವ ಭೂ ದಾಖಲೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಒದಗಿಸುವುದು ಬಹಳ ಮುಖ್ಯ ಎಂದು ಅರಿತ ಅಲ್ಲಿನ ಅಧಿಕಾರಿಗಳು ಅನೇಕ ಕೊರತೆಗಳ ನಡುವೆಯೂ ಸಾಧನೆ ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ಸರಿಯಾದ ಸೂಚ್ಯಂಕದ ಕೊರತೆಯಿಂದಾಗಿ ಸಮಸ್ಯೆಯಾಗಿತ್ತು. ದಾಖಲೆಗಳನ್ನು ಪದೇ ಪದೇ ನಿರ್ವಹಿಸುವಾಗ ತಪ್ಪಾದ ಸ್ಥಳದಲ್ಲಿ ಇಡುವುದರಿಂದ ಪ್ರಮುಖ ದಾಖಲೆಗಳು ಸಿಗುತ್ತಿರಲಿಲ್ಲ. ದಾಖಲೆಯ ಪ್ರತಿಗಾಗಿ ಅರ್ಜಿ ಸಲ್ಲಿಸಿದ ನಂತರ ಜನ ಅನೇಕ ದಿನಗಳವರೆಗೆ ಕಾಯಬೇಕಿತ್ತು. ಆದರೆ, ಇದೀಗ 50 ವರ್ಷ ಹಿಂದಿನ ದಾಖಲೆಗಳನ್ನು ಸಹ ಸಕಾಲದಲ್ಲಿ ಪಡೆಯಲು ಸಾಧ್ಯವಾಗುತ್ತಿದೆ. `ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, 12 ತಾಲೂಕಿನಲ್ಲಿಯೂ ಭೂ ಸುರಕ್ಷಾ ಕೆಲಸ ನಡೆಯುತ್ತಿದೆ. ಜನ ಮನೆಯಲ್ಲಿಯೇ ಕುಳಿತು ಅಗತ್ಯ ದಾಖಲೆಪಡೆಯಲು ಈ ಯೋಜನೆ ಅನುಕೂಲವಾಗಲಿದೆ' ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅನಿಸಿಕೆ ಹಂಚಿಕೊoಡಿದ್ದಾರೆ.