
ಮುಂಡಳ್ಳಿಯಲ್ಲಿ ಕೆಂಪು ಕಲ್ಲು ಅವ್ಯವಸ್ಥಿತ ಗಣಿಗಾರಿಕೆ: ಸರ್ಕಾರದ ಮೌನ ಚಿಂತಾಜನಕ
News Details
ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಚೀರೆಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಯಾವುದೇ ಪರವಾನಿಗೆ ಪಡೆಯದೇ ರಾಜಾರೋಷವಾಗಿ ಕೆಂಪು ಕಲ್ಲು ತೆಗೆಯುವ ಕೆಲಸದ ಬಗ್ಗೆ ಸಾರ್ವಜನಿಕರು ದೂರಿದರೂ, ಸರ್ಕಾರ ಮಾತ್ರ ಪತ್ರ ವ್ಯವಹಾರದಲ್ಲಿಯೇ ಪ್ರಕರಣ ಮುಗಿಸುವ ಲಕ್ಷಣ ಕಾಣಿಸುತ್ತಿದೆ.
ಇಲ್ಲಿನ ಸರ್ವೆ ನಂಬರ 207/2 ಹಾಗೂ ಸುತ್ತಲಿನ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕಲ್ಲು ತೆಗೆಯಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಜನ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದು, ಗಣಿ ಇಲಾಖೆಯವರು ಭೇಟಿ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಸಹ ಭೇಟಿ ನೀಡಿದ್ದು, 15 ಗುಂಟೆ ಜಾಗದಲ್ಲಿ ಕಲ್ಲು ತೆಗೆದಿರುವ ಬಗ್ಗೆ ವರದಿ ಸಲ್ಲಿಸಿದ್ದಾರೆ. ಪೊಲೀಸರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ತಪ್ಪಿತಸ್ಥರ ಬಗ್ಗೆ ಕ್ರಮ ಜರುಗಿಸುವ ಬದಲು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಪತ್ರ ಬರೆಯುವ ಕೆಲಸ ಮಾತ್ರ ನಡೆಯುತ್ತಿದೆ.
ಈ ನಡುವೆ ಆ ಭೂಮಿಯ ಮಾಲಕ ಪ್ರವೀಣ ಕಿಣಿ ಎಂಬಾತರು `ಈ ಭೂಮಿಯನ್ನು ನಾನು ಅರ್ಜುನ್ ಎಂಬಾತರಿಗೆ ಸಮದಟ್ಟು ಮಾಡಿಕೊಡುವಂತೆ ತಿಳಿಸಿದ್ದೇನೆ. ಅವರೇ ಅಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ' ಎಂದು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಆ ದೂರಿನ ಅನ್ವಯ ಗಣಿ ಇಲಾಖೆಗೆ ಪತ್ರ ಬರೆದಿದ್ದಾರೆ. ಗಣಿ ಇಲಾಖೆಯವರು ಪೊಲೀಸರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಆದರೆ, ಯಾರಿಂದಲೂ ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಅಧಿಕಾರಿಗಳು ದಾಳಿ ನಡೆಸಿದಾಗ ಅಕ್ರಮ ಚಟುವಟಿಕೆಗೆ ಸಹಕರಿಸಿದ ಯಂತ್ರಗಳು ಸ್ಥಳದಲ್ಲಿದ್ದವು. ಆದರೆ, ಅದನ್ನು ಯಾರೂ ವಶಕ್ಕೆ ಪಡೆಯಲಿಲ್ಲ.
ಇಲ್ಲಿನ ಕೆಂಪು ಕಲ್ಲು ಗಣಿಗಾರಿಕೆಯಿಂದ ಸರ್ಕಾರಕ್ಕೂ ರಾಜಧನ ಪಾವತಿ ಆಗಿಲ್ಲ. ಅಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಅಲ್ಲಿನವರಿಗೂ ನೆಮ್ಮದಿಯಿಲ್ಲ. ಸಮೀಪದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸಹ ಸಮಸ್ಯೆ ತಪ್ಪಿಲ್ಲ. ಇಲ್ಲಿ ಜೋರಾಗಿ ಓಡಾಡುವ ಲಾರಿಗಳಿಗೆ ಕಡಿವಾಣ ಹಾಕಿ ಎಂದು ಜನ ಬೊಬ್ಬೆ ಹೊಡೆದರೂ ಅದನ್ನು ಯಾರೂ ಕೇಳಿಸಿಕೊಂಡಿಲ್ಲ.