
ಹೊನ್ನಾವರದಲ್ಲಿ ಬೈಕ್ ಅಪಘಾತ: ಸುರೇಶ್ ಭಂಡಾರಿ ಸಾವು
News Details
ಹೊನ್ನಾವರದ ತೊಳಸಾಣಿ-ಚಿಕ್ಕೋಣಿ ರಸ್ತೆಯಲ್ಲಿ ವೇಗವಾಗಿ ಚಲಿಸಿದ ಬೈಕು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುರೇಶ ಭಂಡಾರಿ ಎಂಬಾತರು ಅಲ್ಲಿಯೇ ಸಾವನಪ್ಪಿದ್ದಾರೆ.
ಕುಮಟಾದ ಬಾಡದಲ್ಲಿ ಸುರೇಶ ಭಂಡಾರಿ (73) ವಾಸವಾಗಿದ್ದರು. ಬ್ಯಾಂಕ್ ನೌಕರರಾಗಿದ್ದ ಅವರು ನಿವೃತ್ತಿ ನಂತರ ಮನೆಯಲ್ಲಿದ್ದರು. ಏಪ್ರಿಲ್ 10ರಂದು ಕುಮಟಾ ಹೊಲನಗದ್ದೆಯ ರಾಘವೇಂದ್ರ ನಾಯ್ಕ (19) ಅವರ ಜೊತೆ ಸುರೇಶ ಭಂಡಾರಿ ಅವರು ಬೈಕ್ ಸಂಚಾರ ನಡೆಸಿದ್ದರು.
ರಾಘವೇಂದ್ರ ನಾಯ್ಕರನ್ನು ಹಿಂದೆ ಕೂರಿಸಿಕೊಂಡ ಸುರೇಶ ಭಂಡಾರಿ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದರು. ಹೊನ್ನಾವರದ ಚಿಕ್ಕೊಳ್ಳಿಯ ಬಂಗಾರಗುAಡಿ ರಸ್ತೆ ಕಡೆ ಅವರು ಚಲಿಸಿದರು. ರಸ್ತೆ ಇಳಿಜಾರು ಹಾಗೂ ತಿರುವನ್ನು ಲೆಕ್ಕಿಸದೇ ಜೋರಾಗಿ ಬೈಕು ಓಡಿಸಿದರು. ರಸ್ತೆ ಅಂಚಿನಲ್ಲಿದ್ದ ಮರಕ್ಕೆ ಬೈಕ್ ಗುದ್ದಿದರು.
ಬೈಕ್ ಮರಕ್ಕೆ ಗುದ್ದಿದ ರಭಸಕ್ಕೆ ಸುರೇಶ ಭಂಡಾರಿ ಅವರ ಕಣ್ಣು, ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಚೇತರಿಸಿಕೊಳ್ಳುವುದರೊಳಗೆ ಅವರು ಅಲ್ಲಿಯೇ ಕೊನೆ ಉಸಿರೆಳೆದರು. ಬೈಕ್ ಹಿಂದೆ ಕೂತಿದ್ದ ರಾಘವೇಂದ್ರ ನಾಯ್ಕ ಅವರು ಈ ಅಪಘಾತದಿಂದ ಗಾಯಗೊಂಡರು. ಮೊಣಕಾಲು ಹಾಗೂ ಹೊಟ್ಟೆಗೆ ಗಾಯ ಮಾಡಿಕೊಂಡ ರಾಘವೇಂದ್ರ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಅಪಘಾತದ ಬಗ್ಗೆ ವಿವರಿಸಿ, ದೂರು ದಾಖಲಿಸಿದರು.