
ನಗೆ ಗ್ರಾಮದ ಅಭಿವೃದ್ಧಿಗೆ ಮುಖ್ಯಶಿಕ್ಷಕರಿಂದ 1 ಲಕ್ಷ ರೂ. ದಾನ
News Details
ಕಾರವಾರದ ನಗೆ ಗ್ರಾಮದ ಅಭಿವೃದ್ಧಿಗೆ ಅಲ್ಲಿನ ಶಾಲೆಯ ಮುಖ್ಯ ಶಿಕ್ಷಕ ಅಖ್ತರ್ ಸೆಯ್ಯದ್ ಅವರು ಸರಿ ಸುಮಾರು 1 ಲಕ್ಷ ರೂ ಹಣ ವ್ಯಯಿಸಿದ್ದಾರೆ. ರಸ್ತೆ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ದಾರಕ್ಕಾಗಿ ಅವರು ತಾವು ದುಡಿದ ಹಣವನ್ನು ವಿನಿಯೋಗಿಸಿದ್ದಾರೆ.
ಕಾರವಾರ ತಾಲೂಕಿನ ಕುಗ್ರಾಮಗಳಲ್ಲಿ ನಗೆ ಗ್ರಾಮವೂ ಒಂದು. ದಟ್ಟ ಅರಣ್ಯವನ್ನು ಹೊಂದಿರುವ ಈ ಊರಿಗೆ ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಇದರಿಂದ ಮಕ್ಕಳು ಶಾಲೆಗೆ ಬರಲು ಸಮಸ್ಯೆ ಆಗುವುದನ್ನು ಅರಿತ ಅಕ್ತರ್ ಸಯ್ಯದ್ ಅವರು ಅದನ್ನು ದೂರ ಮಾಡುವ ಪ್ರಯತ್ನ ನಡೆಸಿದ್ದಾರೆ. ಕೋಳಿಮಂಕೆ ಮಜರೆಯ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಬರುವಾಗ ನಗೆ ಹಾಗೂ ಮಚ್ಚಳ್ಳಿ ಗುಡ್ಡದಿಂದ ಬರುವ ನೀರು ಅಡ್ಡವಾಗುವುದನ್ನು ಅರಿತು ಆ ಭಾಗದಲ್ಲಿ ಅಖ್ತರ ಸೈಯ್ಯದ ಅವರು 20 ಟಿಪ್ಪರ್ ಮಣ್ಣು ಹಾಕಿಸಿದ್ದಾರೆ. ಇದರೊಂದಿಗೆ ನಗೆ ಗ್ರಾಮದ ಶ್ರೀ ಉದ್ಭವಲಿಂಗ ದೇವಸ್ಥಾನದ ಆವರಣಕ್ಕೆ ಸಹ ಅಗತ್ಯ ಮಣ್ಣು ಪೂರೈಸಿ ನೆಲವನ್ನು ಸಮದಟ್ಟು ಮಾಡಿ ಕೊಟ್ಟಿದ್ದಾರೆ.
`ಶಾಲೆ ಹಾಗೂ ದೇವಾಲಯದ ಬಗ್ಗೆ ಮುಖ್ಯಶಿಕ್ಷಕ ಅಖ್ತರ ಸೈಯ್ಯದ ಅವರು ಅಪಾರ ನಂಬಿಕೆಯಿರಿಸಿಕೊoಡಿದ್ದಾರೆ. ದೇವರ ಬಗ್ಗೆ ವಿಶೇಷ ಕಾಳಜಿವಹಿಸಿ ಅಖ್ತರ ಜೆ ಸೈಯದ್ ಅವರು ಊರಿನವರ ಮನಗೆದ್ದಿದ್ದಾರೆ' ಎಂದು ಕೋಳಿಮಂಕೆಯ ಮಜರೆಯ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ರಾಮಾ ಗೋರಖ್ಯಾ ಗೌಡ ಅಭಿಪ್ರಾಯವ್ಯಕ್ತಪಡಿಸಿದರು. `ನಗೆ ಗ್ರಾಮದ ಸುಗ್ಗಿ ಕೋಲು ಕುಣಿಯುವ ದೇವಸ್ಥಾನ, ಬಲಿದೇವರ ಕಟ್ಟೆಗೂ ಅವರು ಸ್ವಂತ ಖರ್ಚಿನಿಂದ ಕೆಲಸ ಮಾಡಿಕೊಟ್ಟಿದ್ದಾರೆ' ಎಂದವರು ವಿವರಿಸಿದರು.