
ಕಾರವಾರ ಅಸ್ನೋಟಿಯಲ್ಲಿ ಕಳ್ಳತನ: ಸಿಕ್ಕಿಬಿದ್ದ ಸಮೀರ ದೇಸಾಯಿಗೆ ಸಾರ್ವಜನಿಕರಿಂದ ಥಳನೆ
News Details
ಕಾರವಾರದ ಅಸ್ನೋಟಿಯ ಮನೆಯೊಂದಕ್ಕೆ ನುಗ್ಗಿ ಕಳ್ಳತನ ನಡೆಸಿದ್ದ ಜೊಯಿಡಾದ ಸಮೀರ ದೇಸಾಯಿ ಸಿಕ್ಕಿ ಬಿದ್ದಿದ್ದು, ಸಾರ್ವಜನಿಕರು ಸಮೀರ ದೇಸಾಯಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಪೊಲೀಸರು ಆಗಮಿಸಿ ಸಮೀರ್ ದೇಸಾಯಿ ಅವರನ್ನು ವಶಕ್ಕೆಪಡೆದಿದ್ದಾರೆ.
ಅಸ್ನೋಟಿಯ ಸುರಕ್ಷಾ ಸಾಳುಂಕೆ ಎಂಬಾತರ ಮನೆಯಲ್ಲಿ ಈಚೆಗೆ ಕಳ್ಳತನ ನಡೆದಿತ್ತು. ಕಳ್ಳತನ ನಡೆದ ನಂತರ ಸಮೀರ್ ದೇಸಾಯಿ ನಾಪತ್ತೆಯಾಗಿದ್ದು, ಅವರ ಮೇಲೆ ಎಲ್ಲರಿಗೂ ಅನುಮಾನ ಕಾಡಿತ್ತು. ಸಮೀರ್ ದೇಸಾಯಿ ಈ ಹಿಂದೆ ಸಹ ಕಳ್ಳತನ ಆರೋಪ ಎದುರಿಸುತ್ತಿದ್ದರು. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದರು.
ಈ ನಡುವೆ ಸಮೀರ ದೇಸಾಯಿ ಭಾನುವಾರ ಮತ್ತೆ ಕಾರವಾರ ಪ್ರವೇಶಿಸಿದ್ದರು. ಕಳ್ಳತನಕ್ಕಾಗಿ ಹೊಸ ಮನೆಯ ಹುಡುಕಾಟ ನಡೆಸುತ್ತಿದ್ದರು. ಇದನ್ನು ಅರಿತ ಅಸ್ನೋಟಿಯ ಜನ ಸಮೀರ್ ದೇಸಾಯಿ ಅವರ ಕಳ್ಳತನ ಕೃತ್ಯಕ್ಕೆ ತಡೆ ಒಡ್ಡಿದರು. ಭಾನುವಾರ ರಾತ್ರಿ ಸಮೀರ ದೇಸಾಯಿ ಅವರನ್ನು ಕಂಬಕ್ಕೆ ಕಟ್ಟಿ ಥಳಿಸಿದರು. ಅದಾದ ನಂತರ ಪೊಲೀಸರಿಗೆ ಫೋನ್ ಮಾಡಿದರು.
ಮೊದಲು ಕಳ್ಳತನ ಮಾಡಿದನ್ನು ಸಮೀರ ದೇಸಾಯಿ ಒಪ್ಪಿಕೊಳ್ಳಲಿಲ್ಲ. ಎರಡು ಏಟು ಬಿದ್ದ ತಕ್ಷಣ `ಮೊದಲ ಬಾರಿ ಕಳ್ಳತನ ಮಾಡಿದ್ದು, ಕ್ಷಮಿಸಿ' ಎಂದು ಊರಿನವರ ಕಾಲಿಗೆ ಬಿದ್ದರು. ಅದಾಗಿಯೂ ಊರಿನ ಜನ ಪೊಲೀಸರನ್ನು ಕರೆಯಿಸಿ ಕಳ್ಳನನ್ನು ಅವರಿಗೆ ಒಪ್ಪಿಸಿದರು.