Loading...
  • aksharakrantinagarajnaik@gmail.com
  • +91 8073197439
Total Visitors: 2788
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-15

ಮಲೆನಾಡಿನಲ್ಲಿ ಮತ್ತೆ ಆರಂಭವಾಯ್ತು ಅಪ್ಪೆಮಿಡಿ ಹುಡುಕಾಟ

News Details

ಮಲೆನಾಡಿನಲ್ಲಿ ಮಾವಿನಕಾಯಿ ಹಂಗಾಮು ಪೂರ್ವದಲ್ಲಿಯೇ ಅಪ್ಪೆಮಿಡಿಗಾಗಿ ಹುಡುಕಾಟ ಶುರುವಾಗುತ್ತದೆ. ಪರಿಚಯಸ್ಥರ ಬಳಿ `ನನಗೆ ಇಷ್ಟು ಮಿಡಿ ಬೇಕು' ಎಂಬ ಮುಂಗಡ ಬುಕ್ಕಿಂಗ್ ಸಹ ನಡೆಯುತ್ತದೆ. ಆದರೆ, `ಬೇಡಿಕೆಗೆ ತಕ್ಕ ಬೆಲೆ ಇದ್ದರೂ ಅಪ್ಪೆಮಿಡಿ ಮಾತ್ರ ಆ ಪ್ರಮಾಣದಲ್ಲಿ ಸಿಗುತ್ತಿಲ್ಲ' ಎಂಬುದು ಪ್ರತಿ ವರ್ಷವೂ ಕೇಳಿಬರುವ ದೂರು!

ಬಗೆ ಬಗೆಯ ಉಪ್ಪಿನಕಾಯಿಗಳಲ್ಲಿ ಅಪ್ಪೆಮಿಡಿಯ ಉಪ್ಪಿನಕಾಯಿಗೆ ವಿಶೇಷ ಮನ್ನಣೆ. ಅದರಲ್ಲಿಯೂ ಶಿರಸಿ ಸೀಮೆಯ `ಅನಂತನ ಅಪ್ಪೆಮಿಡಿ' ನೂರಾರು ವರ್ಷಗಳಿಂದ ಪ್ರಸಿದ್ಧಿಪಡೆದಿದ್ದು, ದುಪ್ಪಟ್ಟು ದುಡ್ಡು ಕೊಟ್ಟರೂ ಈ ತಳಿಯ ಮಿಡಿ ಸಿಗುವುದು ಅಪರೂಪ. ಮಲೆನಾಡಿನ ಅಪ್ಪೆಮಿಡಿಗೆ ಈಚೆಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದೆ. ಆದರೆ, ಬೇಡಿಕೆಗೆ ತಕ್ಕ ಫಸಲು ಮಾರುಕಟ್ಟೆಗೆ ಬರುತ್ತಿಲ್ಲ. ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಫಸಲು ಬಂದಿದ್ದರೂ ಆ ಮರ ಏರಿ ಕಾಯಿ ಕೊಯ್ಯುವ ಧೈರ್ಯ ಯಾರಿಗೂ ಇಲ್ಲ. ಹೀಗಾಗಿ ಬಹುತೇಕರ ಪಾಲಿಗೆ ಅಪ್ಪೆಮಿಡಿ `ಹುಳಿ'ಯಾಗಿಯೇ ಉಳಿದಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನಕಾಯಿಗಳು ಸಿಗುತ್ತಿದೆ. ಬೇರೆ ಬೇರೆ ಜಾತಿಯ ಮಾವುಗಳು ಬೆಳೆಯುವ ಮುನ್ನವೇ ಕೊಯ್ದು ಅದನ್ನು ಅಪ್ಪೆಮಿಡಿ ಹೆಸರಿನಲ್ಲಿ ಮಾರಾಟ ಮಾಡುವ ಕೆಲಸವೂ ನಡೆದಿದೆ. ಒಂದು ಅಪ್ಪೆಮಿಡಿಗೆ 5ರೂಪಾಯಿಯಿಂದ 10ರೂಪಾಯಿವರೆಗೆ ಮಾರಾಟವಾಗುತ್ತಿದ್ದು, ಇಲ್ಲಿ `ಮೊದಲು ಬಂದವರಿಗೆ ಮಾತ್ರ ಆದ್ಯತೆ' ಎಂಬ ರೀತಿಯಲ್ಲಿ ಲಭ್ಯತೆಗೆ ಅನುಸಾರವಾಗಿ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಅಪ್ಪೆಮಿಡಿ ಪೇಟೆಯ ರಸ್ತೆಬದಿಯಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಅಷ್ಟೂ ಮಾರಾಟವಾಗುತ್ತಿದೆ.

ಅದರಲ್ಲಿಯೂ, ಅನಂತನ ಅಪ್ಪೆಮಿಡಿ ಹುಡುಕಿ ದಾಂಡೇಲಿ, ಜೊಯಿಡಾ, ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಮಾರುಕಟ್ಟೆಗೆ ನಾನಾ ಭಾಗದ ಜನ ಬರುತ್ತಾರೆ. ಬನವಾಸಿ, ಮಳಗಿ, ಮುಂಡಗೋಡ ಭಾಗದಲ್ಲಿ ಸಹ ಇದೀಗ ಅಪ್ಪೆಮಿಡಿ ಗಿಡ ನಾಟಿ ನಡೆದಿದೆ. ಆದರೆ, ಅನಂತನ ಅಪ್ಪೆಮಿಡಿ ಸದ್ಯಕ್ಕೆ ಕೆಲವರ ಮನೆ ಬಳಕೆಗೆ ಮಾತ್ರ ಸೀಮಿತವಾಗಿದೆ. ಇದರೊಂದಿಗೆ ಉಪ್ಪಿನಕಾಯಿ ಕಂಪನಿಗಳು ಸಹ ಅಪ್ಪೆಮಿಡಿಯ ಹಿಂದೆ ಬಿದ್ದಿದ್ದು, ಕಂಪನಿಗಳಿಗೆ ಅಗತ್ಯವಿರುವಷ್ಟು ಮಿಡಿ ಎಂದಿಗೂ ಸಿಕ್ಕ ಉದಾಹರಣೆಗಳಿಲ್ಲ.

ನೈಸರ್ಗಿಕವಾಗಿ ಬೆಳೆಯುತ್ತಿದ್ದ ಅಪ್ಪೆಮಿಡಿಗಳ ಮರ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ, ವಾತಾವರಣ ವೈಫಲ್ಯ ಸೇರಿ ವಿವಿಧ ಕಾರಣಗಳಿಂದ ಮರಕ್ಕೆ ಅನುಗುಣವಾಗಿ ಫಸಲು ಬರುತ್ತಿಲ್ಲ. ಹೀಗಾಗಿ ಕೆಲವರು ಅಪ್ಪೆಮಿಡಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಆದರೆ, ಅದರಲ್ಲಿ ಸಹ ನಿರೀಕ್ಷಿತ ಪ್ರಮಾಣದಲ್ಲಿ ಹೂ ಬಿಡುತ್ತಿಲ್ಲ. ಹೀಗಾಗಿ ಪ್ರತಿ ವರ್ಷವೂ ಅಪ್ಪೆಮಿಡಿ ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೇಡಿಕೆಗೆ ತಕ್ಕ ಮಿಡಿ ಸಿಗುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನ ಬೆಟ್ಟಗುಡ್ಡಗಳನ್ನು ಅಲೆದಾಡುತ್ತಾರೆ. ಹೊಳೆ ಅಂಚಿನಲ್ಲಿನ ಅಪ್ಪೆಮಿಡಿ ಸಂಗ್ರಹಿಸಿ ಬೆಳಗ್ಗೆ 7 ಗಂಟೆಯ ಒಳಗೆ ಅದನ್ನು ಪೇಟೆಗೆ ತರುತ್ತಾರೆ. ಇಲ್ಲಿನ ವ್ಯಾಪಾರಿಗಳು ಅದನ್ನು ಖರೀದಿಸಿ, ನಂತರ ತಮ್ಮ ಖಾಯಂ ಗ್ರಾಹಕರಿಗೆ ಒದಗಿಸುತ್ತಾರೆ. ಕೆಲವೊಮ್ಮೆ ಬುಡಕಟ್ಟು ಜನರು ನೇರವಾಗಿ ಕೆಲ ಮನೆಗಳಿಗೆ ತೆರಳಿ ಮಾವಿನ ಮಿಡಿ ಮಾರಾಟ ಮಾಡುತ್ತಾರೆ. ಮಾಳಂಜಿ, ಹಳದೋಟ, ನಂದಗಾರ ತಳಿಯ ಅಪ್ಪೆಮಿಡಿ ಕೃಷಿಯೂ ಈಚೆಗೆ ಜನ ಮನ್ನಣೆಗಳಿಸಿದೆ.

`ಹೇಗಾದರೂ ಮಾಡಿ ಅಪ್ಪೆಮಿಡಿ ಸಂಗ್ರಹಿಸಬೇಕು. ಈ ವರ್ಷಕ್ಕೆ ಆಗುವಷ್ಟು ಉಪ್ಪಿನಕಾಯಿ ಸಿದ್ದಪಡಿಸಬೇಕು' ಎಂಬ ಆತುರ ಅನೇಕರದ್ದು. `ನಮ್ಮನೆ ಮದುವೆ-ಮುಂಜಿಗೆ ಅಪ್ಪೆಮಿಡಿ ಉಪ್ಪಿನಕಾಯಿ ಬಡಿಸಬೇಕು' ಎಂಬ ಬಯಕೆ ಹಲವರದ್ದು. `ನಿಮಗೆ ಅಪ್ಪೆಮಿಡಿ ಸಿಕ್ಕಿತಾ?' `ಎಲ್ಲಿ ಸಿಕ್ಕಿತು?' `ಯಾರು ಕೊಟ್ಟರು?' `ಉಪ್ಪಿನ ಕಾಯಿ ಹಾಕಾಯ್ತ?' ಎಂಬ ಪ್ರಶ್ನೆಗಳು ಮದುವೆ-ಮುಂಜಿ ಸೇರಿ ಎಲ್ಲಾ ಬಗೆಯ ನೆಂಟರ ಮನೆಯಲ್ಲಿಯೂ ಚರ್ಚಿತ ವಿಷಯ! ಕೊನೆಗೆ `ನಮಗೂ ಸ್ವಲ್ಪ ಮಿಡಿ ಕೊಡಿ' ಎಂಬ ನಯವಾದ ಬೇಡಿಕೆ. ಅಪ್ಪೆ ಮಿಡಿ ಸಿಗದೇ ಇದ್ದರೆ ಜೀರಿಗೆ ಮಿಡಿ ಅಥವಾ ಸಾದಾ ಮಾವಿನ ಮಿಡಿಯ ಉಪ್ಪಿನಕಾಯಿ ಉಣಬಡಿಸುವುದು ಎಲ್ಲರಿಗೂ ಅನಿವಾರ್ಯ.