
ಅಂಬೇಡ್ಕರ್ ಭಾವಚಿತ್ರ ಅಡಿ ನೌಕರರು ಕರ್ತವ್ಯಕ್ಕೆ ಬದ್ಧರಾಗಬೇಕು: ಜಿಲ್ಲಾಧಿಕಾರಿ
News Details
`ಸರ್ಕಾರಿ ಕಚೇರಿಗಳಲ್ಲಿ ಬಿ ಆರ್ ಅಂಬೇಡ್ಕರ್ ಅವರ ಫೋಟೋ ಅಳವಡಿಸದರೆ ಸಾಲದು. ಆ ಭಾವಚಿತ್ರದ ಅಡಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು' ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಅಂಬೇಡ್ಕರ್ ಜಯಂತಿ ಆಚರಣೆ ನಡೆದಿದೆ. ಅತ್ಯಂತ ಶಿಸ್ತು ಬದ್ಧವಾಗಿ ಜಯಂತಿ ಆಚರಿಸಲಾಗಿದ್ದು, ಉಪನ್ಯಾಸಗಳ ಮೂಲಕ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಜಿಲ್ಲಾಡಳಿತ ಜನರ ಮುಂದಿರಿಸಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಕೆ ಲಕ್ಷ್ಮೀಪ್ರಿಯಾ ಅವರು `ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಸಾರ್ವಜನಿಕರ ಒಳಿತಿಗಾಗಿ ರಚನೆಯಾಗಿದೆ. ಅದ ಉದ್ದೇಶಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿಗಳದ್ದಾಗಿದೆ. ಅಂಬೇಡ್ಕರ್ ಅವರ ಫೋಟೋ ಕೆಳಗೆ ಕುಳಿತು ಕೆಲಸ ಮಾಡುವ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತಿರಬೇಕು' ಎಂದು ಕರೆ ನೀಡಿದರು.
`ಭಾರತರತ್ನ ಬಿ ಆರ್ ಅಂಬೇಡ್ಕರ್ ಅವರು ಭಾರತ ಮತ್ತು ವಿಶ್ವ ಕಂಡ ಮಹಾನ್ ನಾಯಕರಾಗಿದ್ದು, ಪ್ರತಿಯೊಬ್ಬರೂ ಅವರ ಜೀವನದಿಂದ ಕಲಿಯುವುದು ಸಾಕಷ್ಟಿದೆ' ಎಂದು ಅವರು ಹೇಳಿದರು. `ಅಂಬೇಡ್ಕರ್ ಅವರು ಅತ್ಯಂತ ಮೇಧಾವಿಗಳಾಗಿದ್ದು ಶಿಕ್ಷಣವೇ ಶಕ್ತಿ ಎಂದು ಪ್ರತಿಪಾದಿಸಿದ್ದರು. ಶಿಕ್ಷಣದಿಂದಲೇ ತಮಗೆ ಎದುರಾಗಿದ್ದ ಅನೇಕ ಸವಾಲುಗಳನ್ನು ಮೆಟ್ಟಿ ನಿಂತರು. ಉನ್ನತ ಶಿಕ್ಷಣದಿಂದ ಮಹಾರಾಜರ ಸರ್ಕಾರದಲ್ಲಿ ತಮಗೆ ಉನ್ನತ ಅವಕಾಶಗಳು ದೊರೆತರೂ ಸಹ ಸಮಾಜದ ಒಳಿತಿಗಾಗಿ ನಿರಾಕರಿಸಿ, ಸಾರ್ವಜನಿರ ಒಳಿತಿಗಾಗಿ ಕಾರ್ಯನಿರ್ವಹಿಸಿದರು' ಎಂದು ಜಿಲ್ಲಾಧಿಕಾರಿ ಸ್ಮರಿಸಿದರು.
`ಸಂವಿಧಾನದಲ್ಲಿ ಸಮಾನತೆಯನ್ನು ಅಳವಡಿಸಿದ ಕಾರಣ ಲಿಂಗಬೇಧವಿಲ್ಲದೇ ಇಂದು ಮಹಿಳೆ ಮತ್ತು ಪುರುಷರಿಗೆ ಎಲ್ಲಾ ರಂಗಗಳಲ್ಲಿ ಸಮಾನವಾದ ಅವಕಾಶಗಳು ದೊರೆಯುವಂತಾಗಿದೆ. ಅವರು ಮಹಿಳಾ ಸಬಲೀಕರಣಕ್ಕೆ ಕೂಡಾ ಹೆಚ್ಚಿನ ಒತ್ತು ನೀಡಿದ್ದು, ರಾಜ್ಯದಲ್ಲಿ 10 ಕ್ಕೂ ಹೆಚ್ಚು ಮಹಿಳಾ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ' ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಪ ಜಾತಿ ಮತ್ತು ವರ್ಗಗಳ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಿ ಡಿ ಮನೋಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ದೀಪಕ್ ಕುಡಾಳಕರ್, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಇತರರು ಇದ್ದರು.
--
photo: ಹೊನ್ನಾವರ ಹಳದಿಪುರದ ಭಜನಿಕೇರಿಯಲ್ಲಿ `ಪ್ರೀತಿಪದ ಹಾಗೂ ಅಂಬೇಡ್ಕರ್ ಅಭಿಮಾನಿ ಸಂಘದ ಸಹಯೋಗದಲ್ಲಿ ಮುಕ್ರಿ ಸಮುದಾಯದವರು ಅತ್ಯಂತ ಭಕ್ತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದು, ಸೋಮವಾರ ಸಂಜೆ ಅಲ್ಲಿನ ಚಂದನ ಮುಕ್ರಿ ಅಂಬೇಡ್ಕರ್ ವೇಷಧರಿಸಿ ಗಮನಸೆಳೆದರು. (ಚಿತ್ರ ಕೃಪೆ:ಯಮುನಾ ಗಾಂವ್ಕರ್)