
ಶಿರಸಿ-ಸಿದ್ದಾಪುರ ರಸ್ತೆ ಕಾಮಗಾರಿಗೆ ಶಾಸಕರ ತೀವ್ರ ಅಸಮಾಧಾನ
News Details
ಶಿರಸಿ-ಸಿದ್ದಾಪುರ ಗ್ರಾಮೀಣ ಭಾಗದಲ್ಲಿ ಸಂಚಾರ ನಡೆಸಿದ ಶಾಸಕ ಭೀಮಣ್ಣ ನಾಯ್ಕ ಅವರು ರಸ್ತೆಗೆ ಹಾಕಲಾದ ಡಾಂಬರಿನ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. `ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗೆ ಅವಕಾಶವಿಲ್ಲ' ಎಂದು ಸಾರಿದ ಅವರು ಮರುಡಾಂಬರೀಕರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ಶಾಸಕ ಭೀಮಣ್ಣ ನಾಯ್ಕ ಅವರು ಹೆಗ್ಗರಣಿ ಕಡೆ ತೆರಳುತ್ತಿದ್ದರು. ಕಾರಿನಿಂದ ಇಳಿದ ಅವರು ರಸ್ತೆ ಅಂಚಿನಲ್ಲಿ ಹೊಯ್ದ ಡಾಂಬರು ಪರಿಶೀಲಿಸಿದರು. ದಿಗೋಡಿ ಹತ್ತಿರ ರಸ್ತೆ ಅಂಚಿನ ಡಾಂಬರು ಕಿತ್ತು ನೋಡಿದರು. ಅತ್ಯಮತ ತೆಳುವಾಗಿ ಹಾಕಿದ ಡಾಂಬರು ನೋಡಿ ಅವರು ಸಿಡಿಮಿಡಿಗೊಂಡರು.
ಶಾಸಕರ ಜೊತೆಯಿದ್ದವರು ಕೋಲಿನಿಂದ ಡಾಂಬರು ಅಗೆದರು. ಅಂಟನ್ನು ಕೈಯಲ್ಲಿ ಹಿಡಿದ ಭೀಮಣ್ಣ ನಾಯ್ಕ ಅವರು ಡಾಂಬರು ಮಿಶ್ರಣದ ಬಗ್ಗೆಯೂ ಅಲ್ಲಿದ್ದವರನ್ನು ಪ್ರಶ್ನೆ ಮಾಡಿದರು. ಬೂಟು ಕಾಲಿನಿಂದ ಒದ್ದರೆ ಡಾಂಬಾರು ಕಿತ್ತು ಹೋಗುವ ಹಾಗೆ ಹಾಕಿರುವುದನ್ನು ಸ್ವತಃ ಪರಿಶೀಲಿಸಿದರು. ಸುಮಾರು 10 ನಿಮಿಷಗಳ ಕಾಲ ರಸ್ತೆ ಕಾಮಗಾರಿಯ ಗುಣಮಟ್ಟ ಪ್ರದರ್ಶಿಸಿದರು
ರಸ್ತೆಯಲ್ಲಿ ನಡೆದುಹೋದ ಅವರು ಅಲ್ಲಿದ್ದವರನ್ನು ಮಾತನಾಡಿಸಿದರು. ಕೆಲಸ ಮಾಡುವವರನ್ನು ಕರೆದು `ರೋಡು ಮಾಡುವಾಗ ಸ್ವಲ್ಪ ನೋಡಿ. ಗುಣಮಟ್ಟ ಕಾಯ್ದುಕೊಳ್ಳಿ' ಎಂದು ಸೂಚನೆ ನೀಡಿದರು. ಸ್ಥಳೀಯರು ಸಹ ರಸ್ತೆ ಗುಣಮಟ್ಟದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದು, ಈ ವೇಳೆ ಮರುಡಾಂಬರೀಕರಣಕ್ಕೆ ಶಾಸಕರು ಸೂಚಿಸಿದರು.