
ಆನಗೋಡು-ಬಿಸಗೋಡು ರಸ್ತೆ ಅತಿಕ್ರಮಣ, ಸಾರ್ವಜನಿಕ ಓಡಾಟಕ್ಕೆ ಅಡಚಣೆ
News Details
ಯಲ್ಲಾಪುರದ ಹಲವು ಕಡೆ ಸಾರ್ವಜನಿಕ ಆಸ್ತಿ ಕಬಳಿಸುವ ಕೆಲಸ ಜೋರಾಗಿ ನಡೆದಿದೆ. ಆನಗೋಡು-ಬಿಸಗೋಡು ರಸ್ತೆಯನ್ನು ಸಹ ಅತಿಕ್ರಮಿಸಿ ಹೊಟೇಲ್ ನಿರ್ಮಾಣ ನಡೆದಿದೆ. ಇದರಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಪ್ರಸಿದ್ಧ ಸಾತೋಡ್ಡಿ ಜಲಪಾತಕ್ಕೆ ತೆರಳುವ ರಸ್ತೆ ಅಂಚಿನಲ್ಲಿ ಈಚೆಗೆ ಇನ್ನೊಂದು ಹೊಟೇಲ್ ತಲೆಯೆತ್ತಿದೆ. ಅರಣ್ಯ ಜಾಗ ಅತಿಕ್ರಮಿಸಿ ಹೊಟೇಲ್ ನಿರ್ಮಿಸಿದರೂ ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊAಡು ಬಿಸಗೋಡು ಕ್ರಾಸಿನಲ್ಲಿ `ಪ್ಯಾರಡೈಸ್' ಎಂಬ ಹೊಟೇಲ್ ನಿರ್ಮಾಣವಾಗಿರುವುದಕ್ಕೆ ಸಾರ್ವಜನಿಕರಿಂದಲೂ ಆಕ್ಷೇಪಗಳು ವ್ಯಕ್ತವಾಗಿದೆ. ಅನಧಿಕೃತ ಹೊಟೇಲ್ ತೆರವು ಮಾಡುವಂತೆ ಆಗ್ರಹಿಸಿ ಮೂವರು ಸರ್ಕಾರಕ್ಕೆ ಅಧಿಕೃತ ಪತ್ರ ರವಾನಿಸಿದ್ದಾರೆ.
ಯಲ್ಲಾಪುರದ ದೀಪಕ ನಾಯ್ಕ, ಗಣೇಶನಗರದ ಕೃಷ್ಣ ನಾಯ್ಕ ಹಾಗೂ ಶಯನ್ ನಾಯ್ಕ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ದೂರು ನೀಡಿದ್ದಾರೆ. `ಯಲ್ಲಾಪುರದಿಂದ ಬಿಸಗೋಡು ಮಾರ್ಗವಾಗಿ ಸಂಚರಿಸುವವರಿಗೆ ಹಾಗೂ ಆನಗೋಡು ಕಡೆಯಿಂದ ಯಲ್ಲಾಪುರಕ್ಕೆ ಬರುವವರಿಗೆ ಈ ಹೋಟೆಲ್ ಅಡೆತಡೆ ನೀಡುತ್ತಿದೆ. ಸರ್ಕಾರಿ ಜಾಗ ಅತಿಕ್ರಮಿಸಿ ಅನಧಿಕೃತ ಹೊಟೇಲ್ ನಿರ್ಮಾಣದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
`ಸಣ್ಣ ಪ್ರಮಾಣದಲ್ಲಿ ಹೊಟೇಲ್ ನಿರ್ಮಿಸಿ ಕಾಲಕ್ರಮೇಣ ದೊಡ್ಡ ಕಟ್ಟಡವಾಗುವ ಉದಾಹರಣೆಗಳು ಸಾಕಷ್ಟಿವೆ. ಇಲ್ಲಿ ಸಹ ಅದೇ ರೀತಿ ಆಗುವ ಸಾಧ್ಯತೆಯಿದ್ದು, ಆಗ ಅಪಘಾತಗಳ ಪ್ರಮಾಣ ಹೆಚ್ಚಾಗಲಿದೆ. ಈಗಾಗಲೇ ಈ ಭಾಗದಲ್ಲಿ ಹಲವು ಅಪಘಾತ ನಡೆಯುತ್ತಿದ್ದು, ಕಟ್ಟಡ ನಿರ್ಮಾಣದಿಂದ ಇನ್ನಷ್ಟು ಸಮಸ್ಯೆ ಎದುರಾಗಲಿದೆ.
ಹೀಗಾಗಿ ಕೂಡಲೇ ಅನಧಿಕೃತ ಕಟ್ಟಡ ತೆರವು ಮಾಡುವುದರೊಂದಿಗೆ ಸಾರ್ವಜನಿಕರ ಹಿತ ಕಾಪಾಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ.