
ಬಿಸಗೋಡು ರಸ್ತೆಯ ಹೊಟೇಲ್ ಸಕ್ರಮ: ಮಾಲಕ ಇಮಾಮ ಶೇಖ್ ಸ್ಪಷ್ಟನೆ
News Details
ಯಲ್ಲಾಪುರದ ಬಿಸಗೋಡು ರಸ್ತೆ ಅಂಚಿನ ಹೊಟೇಲ್ ಅಕ್ರಮ ಅಲ್ಲ. ಅದು ಸಕ್ರಮ' ಎಂದು ಹೊಟೇಲ್ ಮಾಲಕ ಶೇಖ್ ಇಮಾಮ ಶೇಖ್ ಹಸನ್ ಹೇಳಿದ್ದಾರೆ. ಈ ಕುರಿತು ಅವರು ಉತ್ತರ ಕನ್ನಡ ಜಿಲ್ಲಾಡಳಿತಕ್ಕೂ ಮನವರಿಕೆ ಪತ್ರ ರವಾನಿಸಿದ್ದಾರೆ.
`ಆನಗೋಡು-ಬಿಸಗೋಡು ರಸ್ತೆಯನ್ನು ಸಹ ಅತಿಕ್ರಮಿಸಿ ಪ್ಯಾರಡೈಸ್ ಎಂಬ ಹೊಟೇಲ್ ನಿರ್ಮಾಣ ನಡೆದಿದೆ. ಇದರಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ' ಎನ್ನುವ ಬಗ್ಗೆ ಮಂಗಳವಾರ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು. ದೀಪಕ ನಾಯ್ಕ, ಕೃಷ್ಣ ನಾಯ್ಕ ಹಾಗೂ ಶಯನ್ ನಾಯ್ಕ ಎಂಬಾತರು ಹೊಟೇಲ್ ತೆರವಿಗೆ ಒತ್ತಾಯಿಸಿದ್ದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.
`ಯಲ್ಲಾಪುರದಿಂದ ಬಿಸಗೋಡು ಮಾರ್ಗವಾಗಿ ಸಂಚರಿಸುವವರಿಗೆ ಹಾಗೂ ಆನಗೋಡು ಕಡೆಯಿಂದ ಯಲ್ಲಾಪುರಕ್ಕೆ ಬರುವವರಿಗೆ ಈ ಹೋಟೆಲಿನಿಂದ ತೊಂದರೆಯಾಗುತ್ತಿದೆ. ಸರ್ಕಾರಿ ಜಾಗ ಅತಿಕ್ರಮಿಸಿ ಅನಧಿಕೃತ ಹೊಟೇಲ್ ನಿರ್ಮಾಣದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದು ಆ ಮೂವರು ಒತ್ತಾಯಿಸಿದ್ದರು. `ಸಣ್ಣ ಪ್ರಮಾಣದಲ್ಲಿ ಹೊಟೇಲ್ ನಿರ್ಮಿಸಿ ಕಾಲಕ್ರಮೇಣ ದೊಡ್ಡ ಕಟ್ಟಡವಾಗುವ ಸಾಧ್ಯತೆಯಿದೆ. ಇದರಿಂದ ಅಪಘಾತ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ' ಎಂದು ಕಳವಳವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಬುಧವಾರ ಆ ಹೊಟೇಲ್ ಉಸ್ತುವಾರಿವಹಿಸಿರುವ ಶೇಖ್ ಇಮಾಮ ಪರವಾಗಿ ಅವರ ಬೆಂಬಲಿಗರು ತಹಶೀಲ್ದಾರ್ ಕಚೇರಿ ಮೂಲಕ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. `ಅನಾಧಿಕಾಲದಿಂದಲೂ ಇಲ್ಲಿನ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಬರಲಾಗಿದೆ. ಆ ಕ್ಷೇತ್ರದ ಜಿಪಿಎಸ್ ಸಹ ನಡೆದಿದ್ದು, ಅಲ್ಲಿ ವಾಸ್ತವ್ಯದ ಮನೆಯೂ ಇದೆ. ಜೀವನೋಪಾಯಕ್ಕಾಗಿ ಸದ್ಯ ಹೊಟೇಲ್ ನಿರ್ಮಿಸಲಾಗಿದೆ. ಹೊಟೇಲ್ ನಿರ್ಮಾಣಕ್ಕಾಗಿ ಹೊಸ ಅತಿಕ್ರಮಣ ನಡೆದಿಲ್ಲ' ಎಂದು ಶೇಖ್ ಇಮಾಮ ಕುಟುಂಬದವರು ಸ್ಪಷ್ಠಪಡಿಸಿದ್ದಾರೆ.
`ತಮ್ಮ ಅತಿಕ್ರಮಣ, ಅಪರಾತಪರ ಬಚ್ಚಿಡುವುದಕ್ಕಾಗಿ ದೂರುದಾರರು ಬೇರೆಯವರ ವಿರುದ್ಧ ತಕರಾರು ಅರ್ಜಿ ಸಲ್ಲಿಸುತ್ತಿದ್ದಾರೆ. ದೂರುದಾರರು ಸಹ ಸಬಗೇರಿ ಸೇರಿ ವಿವಿಧ ಕಡೆ ಅರಣ್ಯ ಅತಿಕ್ರಮಣ ನಡೆಸಿದ್ದಾರೆ. ಆ ಪ್ರಕರಣದ ದಾರಿ ತಪ್ಪಿಸಲು ಜಿಪಿಎಸ್ ಆದ ಅರಣ್ಯ ಅತಿಕ್ರಮಣ ಕ್ಷೇತ್ರದ ಬಗ್ಗೆ ತಕರಾರು ಸಲ್ಲಿಸುತ್ತಿದ್ದಾರೆ. ಜಿಪಿಎಸ್ ಆದ ಕ್ಷೇತ್ರವನ್ನು ಖುಲ್ಲಾಪಡಿಸಿದರೆ ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿದ ಹಾಗಾಗುತ್ತದೆ' ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಪತ್ರದಲ್ಲಿ ಬರೆಯಲಾಗಿದೆ. ಮಂಜುನಾಥ ಹೆಗಡೆ, ಜಯಂತ ಮಾವಳ್ಳಿ, ಅಬ್ದುಲ್ ರಹಮಾನ್ ಶೇಖ್, ಪೂಜಾ ನೇತ್ರೇಕರ್, ಬಶೀರ ಶೇಖ್, ದಸ್ತಗಿರಿ ಶೇಖ್, ರಾಜರಾಮ ಗಾಂವ್ಕರ್, ಹಾಲಿಮಾ ರಫಿಕ್, ಎಂ ಬಿ ಗೌಸ್ ಇದ್ದರು.