
ಭಟ್ಕಳ ಯುವಕ ಮೊಬೈಲ್ ಗೇಮ್‌ನಿಂದ ಹಾಳು, ಇಲಿ ಮದ್ದು ಸೇವಿಸಿ ಆತ್ಮಹತ್ಯೆ
News Details
ವಿಪರೀತ ಮೊಬೈಲ್ ಮೋಹಕ್ಕೆ ಒಳಗಾಗಿದ್ದ ಭಟ್ಕಳದ ಮಹ್ಮದ್ ನಿಹಾಲ್ (19 ವರ್ಷ) ಗೇಮ್ ಆಡಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಇದೇ ನೋವಿನಲ್ಲಿ ಪಾನಿಪುರಿಯೊಳಗೆ ಇಲಿ ಮದ್ದು ಸೇರಿಸಿ ತಿಂದು ಸಾವನಪ್ಪಿದ್ದಾರೆ.
ಭಟ್ಕಳದ ಸಾಗರ ರಸ್ತೆಯಲ್ಲಿರುವ ಗುರುಸುದೀಂದ್ರ ಕಾಲೇಜು ಪಕ್ಕ ಎಂ ಎ ಮೊಹಿದ್ಧೀನ್ ವಾಸವಾಗಿದ್ದರು. ಅವರ ಮಗ ಮಹ್ಮದ್ ನಿಹಾಲ್ ಕಾಲೇಜಿಗೆ ಹೋಗುತ್ತಿದ್ದರು. ವಿಪರೀತ ಮೊಬೈಲ್ ನೋಡುತ್ತಿದ್ದ ಮಹ್ಮದ್ ನಿಹಾಲ್ ಅವರು ಮೊಬೈಲ್ ಮೋಹಕ್ಕೆ ಒಳಗಾಗಿದ್ದರು. ಕಳೆದ ಮೂರು ವರ್ಷಗಳಿಂದ ಅವರು ಮೊಬೈಲ್ ಮೂಲಕ ವಿವಿಧ ಆಟ ಆಡುವುದನ್ನು ರೂಢಿಸಿಕೊಂಡಿದ್ದರು. ಹಣ ಹೂಡಿ ಮೊಬೈಲ್ ಗೇಮ್ ಆಡುವುದನ್ನು ಅವರು ಚಟವನ್ನಾಗಿಸಿಕೊಂಡಿದ್ದರು.
ಮೊಬೈಲ್ ಆಟಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ದರು. ಆ ಹಣವನ್ನು ಹಾಳು ಮಾಡಿದ್ದರು. ಅದಾಗಿಯೂ ಮೊಬೈಲ್ ಗೇಮ್ ಮೋಹ ಅವರನ್ನು ಬಿಟ್ಟಿರಲಿಲ್ಲ. ಮೊಬೈಲ್ ಮಾಯೆಯೊಳಗೆ ಸಿಲುಕಿ ಸಾಕಷ್ಟು ಹಣ ಹಾಳಾದ ಪರಿಣಾಮ ಮಹ್ಮದ್ ನಿಹಾಲ್ ಮಾನಸಿಕವಾಗಿ ಕುಗ್ಗಿದ್ದರು. ಮಾನಸಿಕ ಅಸ್ವಸ್ಥರಾದ ಪರಿಣಾಮ ಅವರನ್ನು ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆದರೂ ಮೊಬೈಲ್ ಮೋಹ ಕಡಿಮೆಯಾಗಿರಲಿಲ್ಲ.
ಮೊಬೈಲ್ ಗೇಮ್ ಆಡಿ ಹಣ ಕಳೆದುಕೊಂಡ ನೋವಿನಲ್ಲಿದ್ದ ಮಹ್ಮದ್ ನಿಹಾಲ್ ಅವರು ಏಪ್ರಿಲ್ 8ರಂದು ಪಾನಿಪುರಿಯೊಳಗೆ ಇಲಿ ಮದ್ದು ಸೇರಿಸಿ ಸೇವಿಸಿದರು. ಇದನ್ನು ನೋಡಿದ ಕುಟುಂಬದವರು ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ನಂತರ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು. ಮಹ್ಮದ್ ನಿಹಾಲ್ ಅವರನ್ನು ಏಪ್ರಿಲ್ 13ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆದರೆ, ಏಪ್ರಿಲ್ 15ರಂದು ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದರು. ಭಟ್ಕಳ ಮೊಹಿದ್ಧೀನ್ ಸ್ಟಿಟಿನಲ್ಲಿ ಹಾಲು ಮಾರಾಟ ಮಾಡುವ ಉಮ್ಮರ್ ಫಾರುಖ್ ಅವರು ಈ ಬಗ್ಗೆ ಭಟ್ಕಳ ಶಹರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.