
ಮಟ್ಕಾ ಆಡಿಸುವವರಿಂದ ಲಂಚ ಕೇಳಿದ ಪೊಲೀಸ್ ಅಧಿಕಾರಿಗೆ ಜೈಲು ಶಿಕ್ಷೆ
News Details
ಕಾನೂನುಬಾಹಿರ ಮಟ್ಕಾ ತಡೆಯುವುದನ್ನು ಬಿಟ್ಟು ಮಟ್ಕಾ ಆಡಿಸುವವರ ಬಳಿ ಎರಡು ವಾರಕ್ಕೆ 22 ಸಾವಿರ ರೂ ಲಂಚ ಬೇಡಿದ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಭಟ್ಕಳ ಶಾಖೆಯ ಪಿಎಲ್‌ಡಿ ಬ್ಯಾಂಕಿನ ಪಿಗ್ಮಿ ಎಜೆಂಟರಾಗಿ ಹೊನ್ನಾವರದಲ್ಲಿ ಚಂದ್ರಹಾಸ ನಾಯ್ಕ ಅವರು ಕೆಲಸ ಮಾಡುತ್ತಿದ್ದರು. ಅನಿವಾರ್ಯತೆಗೆ ಸಿಲುಕಿದ ಅವರು ಪಿಗ್ಮಿ ಹಣದ ಜೊತೆ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದರು. ಗೂಡಂಗಡಿಗಳ ಮೂಲಕ ಮಟ್ಕಾ ಹಣ ಸಂಗ್ರಹಿಸಿ ಅದನ್ನು ತಲುಪಿಸಬೇಕಾದವರಿಗೆ ತಲುಪಿಸುವ ಮಟ್ಕಾ ಬುಕ್ಕಿಯಾಗಿ ಚಂದ್ರಹಾಸ ನಾಯ್ಕ ಕೆಲಸ ಮಾಡುತ್ತಿದ್ದರು. 2017ರಲ್ಲಿ ಈ ವಿಷಯ ಅರಿತ ಹೊನ್ನಾವರ ಸಿಪಿಐ ಕಚೇರಿಯ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ `ಪ್ರತಿ ಎರಡು ವಾರಕ್ಕೆ 22 ಸಾವಿರ ರೂ ತಮಗೆ ನೀಡಬೇಕು' ಎಂದು ಚಂದ್ರಹಾಸ ನಾಯ್ಕರ ಬಳಿ ತಾಕೀತು ಮಾಡಿದ್ದರು. `ಹೊನ್ನಾವರ ಸಿಪಿಐ ಅವರಿಗೆ ಹಣ ಕೊಡಬೇಕು' ಎಂದು ಮುರುಳೀಧರ ನಾಯ್ಕ ನಂಬಿಸಿದ್ದರು.
ಇದಕ್ಕೆ ಚಂದ್ರಹಾಸ ನಾಯ್ಕ ಸಹ ಒಪ್ಪಿದ್ದರು. `ಸೋಮವಾರ ಹಣ ಕೊಡುವೆ' ಎಂದು ಚಂದ್ರಹಾಸ ನಾಯ್ಕ ಮಾತು ಕೊಟ್ಟಿದ್ದರು. ಆದರೆ, ಇದಕ್ಕೆ ಮುರುಳೀಧರ ನಾಯ್ಕ ಒಪ್ಪಿಗೆ ಸೂಚಿಸಿರಲಿಲ್ಲ. `ಕೂಡಲೇ ಹಣ ಕೊಡಬೇಕು' ಎಂದು ದುಂಬಾಲು ಬಿದ್ದಿದ್ದರು. ಪದೇ ಪದೇ ಫೋನ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅದರಂತೆ, 2027ರ ನವೆಂಬರ್ 18ರಂದು 22 ಸಾವಿರ ರೂ ಹಣವನ್ನು ವಸೂಲಿ ಮಾಡಿದ್ದರು. ಈ ವೇಳೆ ಭ್ರಷ್ಟಾಚಾರ ನಿಗ್ರಹದಳದವರು ದಾಳಿ ನಡೆಸಿ, ಆ ಹಣವನ್ನು ವಶಕ್ಕೆ ಪಡೆದಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯವೂ 68 ದಾಖಲೆಗಳನ್ನು ಗಮನಿಸಿತು.
ಲೋಕಾಯುಕ್ತರ ಪರವಾಗಿ ಎಲ್ ಎಂ ಪ್ರಭು ಅವರು ವಾದ ಮಂಡಿಸಿದರು. ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಲಂಚಪಡೆದಿರುವುದನ್ನು ಅವರು ಸಾಭೀತು ಮಾಡಿದರು. ಈ ಪ್ರಕರಣದ ವಾದ ಆಲಿಸಿದ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಮುರುಳೀಧರ ನಾಯ್ಕ ಅವರು ನೀಡಿದ ಮುಚ್ಚಳಿಕೆಯನ್ನು ಒಪ್ಪಲಿಲ್ಲ. ಮುರುಳೀಧರ ನಾಯ್ಕ ಅವರ ಜಾಮೀನು ಸಹ ರದ್ದುಪಡಿಸಿ ಜೈಲು ಶಿಕ್ಷೆ ಪ್ರಕಟಿಸಿದರು. ಮುರುಳೀಧರ ನಾಯ್ಕ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ ನ್ಯಾಯಾಲಯ 1ವರ್ಷದ 6 ತಿಂಗಳ ಶಿಕ್ಷೆ ವಿಧಿಸಿತು. ಜೊತೆಗೆ 10 ಸಾವಿರ ರೂ ದಂಡ ಪಾವತಿಸಬೇಕು ಎಂದು ಸಹ ಆದೇಶಿತು. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಮುರುಳೀಧರ ನಾಯ್ಕ ಅವರಿಗೆ ಸೂಚಿಸಿತು.