Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-19

ಸಿಇಟಿ ವಿದ್ಯಾರ್ಥಿಗೆ ಜನಿವಾರ ತೆಗೆಯಲು ತಾಕೀತು – ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವಿರಲಿ: ರಾಘವೇಶ್ವರ ಭಾರತೀ ಸ್ವಾಮೀಜಿ

News Details

ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ತಾಕೀತು ಮಾಡಿದ ಪರೀಕ್ಷಾ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು' ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ಜನಿವಾರದ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ಎಲ್ಲರಿಗೂ ಸಹಾಯಹಸ್ತ ಚಾಚಲು ಶ್ರೀಮಠ ಸಿದ್ಧ' ಎಂದು ಶ್ರೀಗಳು ಘೋಷಿಸಿದ್ದಾರೆ.

`ಜನಿವಾರದ ಕಾರಣಕ್ಕಾಗಿ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ವಿಷಾಧನೀಯ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರ ತುಂಡರಿಸಿರುವುದು ಸಹ ಸಹಿಸಲು ಸಾಧ್ಯವಿಲ್ಲ' ಎಂದವರು ಪ್ರತಿಕ್ರಿಯಿಸಿದ್ದಾರೆ. `ಪ್ರತಿಭಟನೆಯ ಮೂಲಕ ಇದನ್ನು ಸಮುದಾಯದವರು ಖಂಡಿಸಬೇಕು' ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.

`ಅಧಿಕಾರಿಗಳ ಈ ವರ್ತನೆಯ ಹಿಂದೆ ಜಾತಿದ್ವೇಷ ಹಾಗೂ ಜನಿವಾರ ಧರಿಸುವ ಜಾತಿಯವರನ್ನು ಸಂಪೂರ್ಣವಾಗಿ ತುಳಿಯುವ ಭಾವ ಕಾಣಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಮಾನಸಿಕ ಒತ್ತಡದಲ್ಲಿರುವಾಗ ಅಧಿಕಾರಿಗಳು ಈ ರೀತಿ ಕ್ರೌರ್ಯ ಮೆರೆದಿರುವುದು ಖಂಡನೀಯ' ಎಂದು ಹೇಳಿದ್ದಾರೆ.

`ಜನಿವಾರ ಕೀಳುವಾಗ ಮನಸ್ಸಿಗೆ ಎಂಥ ನೋವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಬ್ರಾಹ್ಮಣರು ಇಂಥ ನೋವನ್ನು ಸಹಿಸಬಾರದು. ಈ ಪ್ರಕರಣವನ್ನು ಹಾಗೇ ಬಿಟ್ಟರೆ ದೇಶದಲ್ಲಿ ಬದುಕಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು' ಎಂದು ರಾಘವೇಶ್ವರ ಶ್ರೀ ಆತಂಕವ್ಯಕ್ತಪಡಿಸಿದ್ದಾರೆ. `ಈ ಕೃತ್ಯವನ್ನು ಬ್ರಾಹ್ಮಣರು ಸಂಘಟಿತರಾಗಿ ಪ್ರತಿಭಟಸುವುದು ಅಗತ್ಯ ಮಾತ್ರವಲ್ಲ. ಅನಿವಾರ್ಯವೂ ಹೌದು. ಇದು ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ. ಬೇರೆಯವರೂ ಜನಿವಾರವನ್ನು ಗೌರವದಿಂದ ಧಾರಣೆ ಮಾಡುತ್ತಾರೆ. ಲಿಂಗಾಯಿತರು ಕೂಡಾ ಲಿಂಗವನ್ನು ಧರಿಸುತ್ತಾರೆ. ಅದನ್ನೂ ಇಂಥದ್ದೇ ಸೂತ್ರದಿಂದ ಧರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ಸಮಾಜಕ್ಕೆ ಅಪಾಯ ಕಾದಿದೆ' ಎಂದು ಎಚ್ಚರಿಸಿದ್ದಾರೆ.

`ಧಾರ್ಮಿಕ ಚಿಹ್ನೆಯನ್ನು ತೆಗೆದುಹಾಕಿದರೆ ಪರೀಕ್ಷೆ ಬರೆಯುವುದಿಲ್ಲ ಎಂದು ದೃಢ ನಿರ್ಧಾರ ಕೈಗೊಂಡ ವಿದ್ಯಾರ್ಥಿಗೆ ಅಭಿನಂದನೆ. ಧಾರ್ಮಿಕತೆಯಲ್ಲಿ ರಾಜಿ ಮಾಡಿಕೊಳ್ಳದ ವಿದ್ಯಾರ್ಥಿಯನ್ನು ಪ್ರತಿಯೊಬ್ಬರು ಮೆಚ್ಚಬೇಕು. ಇಡೀ ಬ್ರಾಹ್ಮಣ ಸಮಾಜ ಮಾತ್ರವಲ್ಲ. ಭಾರತೀಯರೆಲ್ಲರೂ ಒಗ್ಗೂಡಿ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಆಶಿಸಿದ್ದಾರೆ.

ಹವ್ಯಕ ಮಹಾಮಂಡಲವೂ ಜನಿವಾರ ತೆಗೆಯುವ ಪ್ರಯತ್ನದ ಘಟನೆಯನ್ನು ಖಂಡಿಸಿದ್ದು, ಸಮಗ್ರ ಹವ್ಯಕ ಮಹಾಮಂಡಲ ಸಭೆಯಲ್ಲಿ ಈ ಬಗ್ಗೆ ಖಂಡನಾ ನಿರ್ಣಯ ಆಂಗೀಕರಿಸಿದೆ. `ಅಕ್ಷಮ್ಯ ಅಪರಾಧ ಎಸಗಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಜನಿವಾರ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ, ವಿದ್ಯಾರ್ಥಿಯ ಭವಿಷ್ಯ ಹಾಗೂ ಆತ್ಮಗೌರವ ರಕ್ಷಿಸಬೇಕು' ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಆಗ್ರಹಿಸಿದ್ದಾರೆ.