
ಐದು ಗ್ಯಾರಂಟಿ ಯೋಜನೆಗಳಲ್ಲಿ ಶೇ.95 ಯಶಸ್ಸು: ಜಿಲ್ಲೆಗೆ ರಾಜ್ಯದಲ್ಲೇ ಮೊದಲ ಸ್ಥಾನ
News Details
ನಮ್ಮ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ಈ ಜಿಲ್ಲೆಯಲ್ಲಿ ಶೇ.95ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದೆ. ಇದರ ಜೊತೆಯಲ್ಲೆ ಈ ಯೋಜನೆಯ ಲಾಭ ನಮಗೆ ಬೇಡಾ ಎಂದು 1970 ಜನ ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದು ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ ಹೇಳಿದರು.
ಶನಿವಾರ ಕುಮಟಾ ತಾಲೂಕು ಪಂಚಾಯತ ಸಭಾಂಗಣದಲ್ಲಿ ಕಳೆದ ವರ್ಷದಲ್ಲಾದ ಗ್ಯಾರಂಟಿ ಯೋಜನೆಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಇಲ್ಲವೇ ಮಧ್ಯವರ್ತಿಗಳ ಮಧ್ಯ ಪ್ರವೇಶವಾಗದೆ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಜನರಿಗೆ ತಲುಪುವಂತಾಗಿದೆ. ಒಂದು ಕುಟುಂಬ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಿಂಗಳು ಕನಿಷ್ಠ 2 ಸಾವಿರದಿಂದ 5 ಸಾವಿರ ರೂ.ಗಳ ವರೆಗೆ ಧನಸಹಾಯ ಪಡೆಯುತ್ತಿದೆ. ಈ ಹಣ ನೇರವಾಗಿ ಫಲಾನುಭವಿಗೆ ತಲುಪುವಂತಾಗಿದೆ ಎಂದರು.
ಶಕ್ತಿಯೋಜನೆಯ ಪ್ರಯೋಜನವನ್ನು ಜಿಲ್ಲೆಯಲ್ಲಿ 11.20 ಕೋಟಿ ಮಹಿಳೆಯರು ಪಡೆದಿದ್ದಾರೆ. ಇದಕ್ಕಾಗಿ 322.40 ಕೋಟಿ ರೂ. ನೀಡಲಾಗಿದೆ. ಯುವ ನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡ 6,400 ಅರ್ಜಿದಾರರಲ್ಲಿ 4469 ಜನರಿಗೆ 8 ಕೋಟಿ ಸಂದಾಯವಾಗಿದೆ. ಗೃಹಜ್ಯೋತಿ ಯೋಜನೆಯಡಿ 3.89 ಲಕ್ಷ ಮನೆಗಳಿಗೆ 326.86 ಕೋಟಿ ಸಂದಾಯ ಮಾಡಲಾಗಿದೆ. ಗೃಹಲಕ್ಷಿö್ಮÃ ಯೋಜನೆಯಡಿ ನೋಂದಣಿಯಾದ 3.34 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ 1095 ಕೋಟಿ ಜಮಾ ಮಾಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ 12.96 ಲಕ್ಷ ಟನ್ ಅಕ್ಕಿ ಸರಬರಾಜು ಮಾಡಲಾಗಿದೆ. ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ದೇಶದಲ್ಲಿಯೇ ಮೊಟ್ಟ ಮೊದಲ ಯೋಜನೆ ಇದಾಗಿದೆ ಎಂದು ಸತೀಶ ನಾಯ್ಕ ಬಣ್ಣಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮೊದ ಮೊದಲು ಭಾರಿ ಟೀಕೆ ಮಾಡುತ್ತಿದ್ದರು. ಈ ರೀತಿ ಟೀಕೆ ಮಾಡಿದವರು ಈಗ ಸುಮ್ಮನಾಗಿದ್ದಾರೆ. ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ನೀಡಿದ್ದೇವೆ. ಉಳ್ಳವರು ಈ ಯೋಜನೆ ಬೇಡ ಎಂದರೆ ಬರೆದುಕೊಡಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಕುಮಟಾ ತಾಲೂಕು ಅಧ್ಯಕ್ಷ ಅಶೋಕ ಗೌಡ, ಸದಸ್ಯರಾದ ಈಶ್ವರ ನಾಯ್ಕ, ಬಾಲಕೃಷ್ಣ ನಾಯಕ, ಭವ್ಯ ಗಾವಡಿ, ನಾಗರಾಜ ಹಿತ್ಲಮಕ್ಕಿ, ಹನುಮಂತ ಪಟಗಾರ, ಗೀತಾ ಭಂಡರ‍್ಕರ್, ರವಿ ಪಟಗಾರ, ನಾರಾಯಣ ಉಪ್ಪಾರ್, ಕಾರವಾರದ ರಾಜೇಂದ್ರ ರಾಣೆ, ರಮೇಶ ನಾಯ್ಕ, ಅಬು ಮಹಮ್ಮದ್, ಶಂಭು ನಾಯ್ಕ, ಅನಂತ ನಾಯಕ ಉಪಸ್ಥಿತರಿದ್ದರು.