
ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಕರ್ ಅವರ ಕೊಲೆಯಾಗಿದೆ
News Details
ಕಾರವಾರ ನಗರಸಭೆ ಮಾಜಿ ಸದಸ್ಯ ಸತೀಶ ಕೋಳಂಕರ್ ಅವರ ಕೊಲೆಯಾಗಿದೆ. ಭಾನುವಾರ ಬೆಳಗ್ಗೆ ವಾಕಿಂಗ್ ಹೊರಟಿದ್ದ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಸತೀಶ ಕೋಳಂಕರ್ ವಿರುದ್ಧ 8ಕ್ಕೂ ಅಧಿಕ ಪೊಲೀಸ್ ಪ್ರಕರಣಗಳಿದ್ದವು. ಹೀಗಾಗಿ ಅವರನ್ನು ಪೊಲೀಸರು ಸಹ ರೌಡಿ ಶೀಟರ್ ಎಂದು ಗುರುತಿಸಿದ್ದರು. ಕೆಲ ದಿನಗಳ ಹಿಂದೆ ಹಣಕಾಸಿನ ವಿಷಯವಾಗಿ ಸತೀಶ್ ಕೋಳಂಕರ್ ಮೇಲೆ ಹಲ್ಲೆಯ ಪ್ರಯತ್ನ ನಡೆದಿತ್ತು. ಇದೇ ಮುಂದುವರೆದ ಭಾಗವಾಗಿ ಕೊಲೆ ನಡೆದ ಅನುಮಾನಗಳಿವೆ.
ಭಾನುವಾರ ಬೆಳಗ್ಗೆ ಸತೀಶ ಕೋಳಂಕರ್ ವಾಯು ವಿಹಾರಕ್ಕೆ ಬಂದಿದ್ದರು. ಮರಳಿ ಮನೆಗೆ ಹೋಗುವಾಗ ಇಬ್ಬರು ಅವರನ್ನು ಅಡ್ಡಗಟ್ಟಿದರು. ಮೊದಲು ಹಲ್ಲೆ ನಡೆಸಿ ನಂತರ ಚಾಕುವಿನಿಂದ ದಾಳಿ ಮಾಡಿದರು. ಸಂತೆ ಮಾರುಕಟ್ಟೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವ ಮುನ್ನವೇ ಸಾವನಪ್ಪಿದರು. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಖಚಿತಪಡಿಸಿದ್ದಾರೆ.
ಸತೀಶ ಕೋಳಂಕರ್ ಅವರು 62ನೇ ವಯಸ್ಸಿನಲ್ಲಿದ್ದರು. ಎರಡು ಬಾರಿ ನಗರಸಭೆ ಸದಸ್ಯರಾಗಿದ್ದರು. ಸದ್ಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. `ಹಂತಕರ ಬಗ್ಗೆ ಸುಳಿವು ಸಿಕ್ಕಿದೆ. ಅವರ ಬಂಧನಕ್ಕಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತ್ರತ್ವದಲ್ಲಿ ತಂಡ ರಚಿಸಲಾಗಿದೆ' ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.