
ಕಾಡಿನಲ್ಲಿ ಇಂಧನ ದಂಧೆ: ಅಂಕೋಲಾ-ಯಲ್ಲಾಪುರ ಗಡಿಯಲ್ಲಿ ಪೊಲೀಸ್ ದಾಳಿ
News Details
ಅಂಕೋಲಾ-ಯಲ್ಲಾಪುರ ಗಡಿಭಾಗದ ಕೊಡ್ಲಗದ್ದೆ ಕಾಡಿನಲ್ಲಿ ಮಾರಾಟವಾಗುತ್ತಿದ್ದ ಪೆಟ್ರೋಲ್-ಡಿಸೇಲ್ ವ್ಯಾಪಾರಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಇಂಧನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಕೊಡ್ಲಗದ್ದೆ ಕ್ರಾಸಿನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮಾರಾಟ ನಡೆಯುತ್ತಿತ್ತು. ಮಾರುಕಟ್ಟೆ ಬೆಲೆಗಿಂತ 5ರಿಂದ 10ರೂ ಕಡಿಮೆ ಬೆಲೆಯಲ್ಲಿ ಇಲ್ಲಿ ಪೆಟ್ರೋಲ್ ಸಿಗುತ್ತಿತ್ತು. ಇಲ್ಲಿಂದ ಪೆಟ್ರೋಲ್ ಹಾಗೂ ಡಿಸೇಲ್ ಪಡೆದ ಅನೇಕರು ವಿವಿಧ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದರು.
ಒಂದು ಲೀಟರಿನಿಂದ ಹಿಡಿದು 30-35ಲೀಟರ್'ವರೆಗಿನ ಕ್ಯಾನುಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ನಡೆದಿತ್ತು. ಪೆಟ್ರೋಲ್ ಹಾಗೂ ಡಿಸೇಲ್ ಗುಣಮಟ್ಟವೂ ಚನ್ನಾಗಿತ್ತು. ಇಲ್ಲಿ ಎಂದಿಗೂ ಕಲಬೆರೆಕೆ ಇಂದನ ನೀಡಿದ ದೂರುಗಳಿರಲಿಲ್ಲ. ಹೀಗಾಗಿ ಅನೇಕ ಐಷಾರಾಮಿ ವಾಹನದವರು ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಇಂಧನ ಮಾರಾಟಕ್ಕೆ ಅಗತ್ಯ ಪರವಾನಿಗೆಯನ್ನು ಮಾರಾಟಗಾರರು ಪಡೆದಿರಲಿಲ್ಲ. ಸ್ಪೋಟಕ ವಸ್ತುಗಳಾದ ಪೆಟ್ರೋಲ್ ಹಾಗೂ ಡಿಸೇಲ್'ನ್ನು ಸುರಕ್ಷಿತವಾಗಿರಿಸಿಕೊಂಡಿರಲಿಲ್ಲ.
ಈ ಹಿನ್ನಲೆ ಅಂಕೋಲಾದ ಪಿಎಸ್‌ಐ ಅಶೋಕ ಧರೆಪ್ಪನವರ್ ಕೊಡ್ಲಗದ್ದೆ ಕ್ರಾಸಿಗೆ ಬಂದರು. ಪೊಲೀಸ್ ಸಿಬ್ಬಂದಿ ಮಹಾಬಲೇಶ್ವರ ನಾಯಕ, ಶ್ರೀಕಾಂತ ಕಟಬರ, ಸಲೀಂ ಮೊಕಾಶಿ, ಪುನೀತ ನಾಯ್ಕ ಅಲ್ಲಿನ ಕಾಡಿನಲ್ಲಿ ಹುಡುಕಾಟ ನಡೆಸಿದರು. ಆಗ, ಕೊಡ್ಲಗದ್ದೆಯ ಸುಧಾಕರ ನಾಯ್ಕ ಅವರು ಕಾಡಿನಲ್ಲಿ ಅಡಗಿಸಿಟ್ಟಿದ್ದ 20ಲೀಟರಿನ 5 ಕ್ಯಾನ್ ಡಿಸೇಲ್ ಕಾಣಿಸಿತು. ಇದರೊಂದಿಗೆ 30, 20 ಹಾಗೂ 10 ಲೀಟರಿನ ಒಂದಷ್ಟು ಕ್ಯಾನುಗಳಲ್ಲಿ ಪೆಟ್ರೋಲ್ ತುಂಬಿಕೊAಡಿರುವುದು ಅರಿವಿಗೆ ಬಂದಿತು. 99 ಲೀಟರ್ ಡಿಸೇಲ್ ಹಾಗೂ 407 ಲೀಟರ್ ಪೆಟ್ರೋಲನ್ನು ಪೊಲೀಸರು ಜಪ್ತು ಮಾಡಿದರು.
ಇದರೊಂದಿಗೆ ಒಂದೊoದು ಲೀಟರ್ ಬಾಟಲಿಯಲ್ಲಿದ್ದ ಇಂಧನವನ್ನು ಸಹ ವಶಕ್ಕೆಪಡೆದರು. ಖಾಲಿ ಕ್ಯಾನು, ಅಳತೆ ಮಾಪನ, ಪ್ಲಾಸ್ಟಿಕ್ ಲಾಳಕೆ, ಹಸಿರು ಬಣ್ಣದ ಪೈಪುಗಳು ಅಲ್ಲಿ ಪೊಲೀಸರ ಕಣ್ಣಿಗೆ ಬಿದ್ದವು. ಅದನ್ನು ಸಹ ಪೊಲೀಸರು ಠಾಣೆಗೆ ತಂದರು. ಯಾವುದೇ ಪರವಾನಿಗೆಪಡೆಯದೇ ಇಂಧನ ದಾಸ್ತಾನು ಮಾಡಿದಕ್ಕಾಗಿ ಕೊಡ್ಲಗದ್ದೆಯ ಸುಧಾಕರ ನಾಯ್ಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.