
ಗೋಕರ್ಣದಲ್ಲಿ ರಸ್ತೆ ಕಬಳಿಕೆ ತಡೆಗೆ ಪೊಲೀಸರ ಕಾರ್ಯಾಚರಣೆ
News Details
ಗೋಕರ್ಣದ ಹಲವು ಕಡೆ ರಸ್ತೆ ಬದಿಯ ಅಂಗಡಿಗಳು ರಸ್ತೆಯನ್ನು ಕಬಳಿಸಿವೆ. ಭಾನುವಾರ ಅಲ್ಲಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಪಿಐ ಶ್ರೀಧರ ಹಾಗೂ ಪಿಎಸ್‌ಐ ಖಾದರ್ ಭಾಷಾ ಅವರು ಈ ದಿನ ಓಂ ಬೀಚ್ ಕಡೆ ತೆರಳಿದರು. ಅಲ್ಲಿ ರಸ್ತೆಯ ಮೇಲಿದ್ದ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದರು. ಪ್ರವಾಸಿಗರ ಓಡಾಟಕ್ಕೆ ಅಸಾಧ್ಯವಾಗುವ ರೀತಿ ಅಂಗಡಿಕಾರರು ರಸ್ತೆಯ ಮೇಲೆ ಬಂದಿದ್ದು, ಅದನ್ನು ತೆರವು ಮಾಡಿದರು. ಮತ್ತೆ ಇದೇ ರೀತಿ ರಸ್ತೆ ಅತಿಕ್ರಮಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಓಂ ಕಡಲತೀರಕ್ಕೆ ತೆರಳುವ ಮೆಟ್ಟುಲುಗಳ ಮೇಲೆ ಅಂಗಡಿ ಮುಂಗಟ್ಟುಗಳಿದ್ದು, ಅದನ್ನು ಪೊಲೀಸರು ತೆರವು ಮಾಡಿಸಿದರು. ಕೆಲವರು ಮಳಿಗೆ ತೆರವಿಗೆ ಒಂದು ದಿನದ ಸಮಯ ಕೇಳಿದರು. ಇದಕ್ಕೆ ಒಪ್ಪಿ ಪೊಲೀಸರು ಸಮಯಾವಕಾಶ ನೀಡಿದರು.
`ಗೋಕರ್ಣದ ರಥಬೀದಿ ಸೇರಿ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಸಹ ಅಂಗಡಿಕಾರರು ರಸ್ತೆಗೆ ಬಂದಿದ್ದಾರೆ. ಇಕ್ಕಟ್ಟಾದ ರಸ್ತೆ ಅತಿಕ್ರಮಣವಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಮುಖ್ಯ ಕಡಲತೀರಕ್ಕೆ ಹೋಗುವ ಕಡೆಯಲ್ಲಿಯೂ ಅತಿಕ್ರಮಣ ತೆರವು ನಡೆಯಬೇಕು' ಎಂದು ಜನ ಆಗ್ರಹಿಸಿದರು.