
ಹೋನ್ನಾವರ ಅರಣ್ಯ ವಿವಾದ ಸ್ಥಳಕ್ಕೆ ಜನಹಿತ ವೇದಿಕೆ ಭೇಟಿ
News Details
ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಣದಾರರು ಸಾಗುವಳಿ ಮಾಡಿಕೊಂಡು ಬಂದಿರುವ ಕ್ಷೇತ್ರದಲ್ಲಿ ಹೊನ್ನಾವರ ಅರಣ್ಯ ಸಿಬ್ಬಂದಿ ಗುಂಡಿ ತೋಡಿದ ಪ್ರದೇಶಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಭೇಟಿ ನೀಡಲಿದ್ದಾರೆ. ಏಪ್ರಿಲ್ 24ರ ಮುಂಜಾನೆ 7 ಗಂಟೆಗೆ ಹೋರಾಟಗಾರರು ಅಲ್ಲಿ ಹಾಜರಿದ್ದು, ಜನರ ಸಮಸ್ಯೆ ಆಲಿಸಲಿದ್ದಾರೆ.
ಹೋರಾಟಗಾರರ ವೇದಿಕೆಯ ಸಂಚಾಲಕ ರಾಮ ಮರಾಠಿ ಯಲಕೋಟಗಿ ಮತ್ತು ಮಹೇಶ ನಾಯ್ಕ ಕಾನಳ್ಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಈಚೆಗೆ ಅರಣ್ಯ ಸಿಬ್ಬಂದಿಯ ದಬ್ಬಾಳಿಕೆ ಹೆಚ್ಚಾಗಿದೆ. ಸಾಗುವಳಿ ಮಾಡುತ್ತಿರುವ ಕ್ಷೇತ್ರವನ್ನು ಅರಣ್ಯ ಸಿಬ್ಬಂದಿ ಅತಿಕ್ರಮಿಸಿ ಗಿಡ ನೆಡುವ ತಯಾರಿ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಲಿದೆ' ಎಂದು ಹೋರಾಟಗಾರರು ಹೇಳಿದ್ದಾರೆ.
`ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಅಲ್ಲಿನವರ ಸಮಸ್ಯೆ ಆಲಿಸಲಿದ್ದಾರೆ. ಅದಾದ ನಂತರ ಕಾನೂನುಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಸ್ಥಳ ಪರಿಶೀಲನೆ ತರುವಾಯ ಅರಣ್ಯಾಧಿಕಾರಿಗಳ ಜೊತೆ ಸಭೆಯನ್ನು ಆಯೋಜಿಸಲಾಗಿದೆ' ಎಂದವರು ಮಾಹಿತಿ ನೀಡಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಅರಣ್ಯ ಸಿಬ್ಬಂದಿ ಅಲ್ಲಿ ಹಸ್ತಕ್ಷೇಪ ಮಾಡಿದ್ದಾರೆ' ಎಂದವರು ದೂರಿದ್ದಾರೆ.
`ಮೊದಲು ಸೌಹಾರ್ದಯುತವಾಗಿ ಪ್ರಕರಣ ಬಗೆಹರಿಸಲು ಒತ್ತು ನೀಡಲಾಗುತ್ತದೆ. ಅದು ಆಗದೇ ಇದ್ದರೆ ಅರಣ್ಯವಾಸಿಗಳಿಗೆ ಆತಂಕ ಮಾಡಿದ ಬಗ್ಗೆ ಹೋರಾಟ ನಡೆಸಲಾಗುತ್ತದೆ' ಎಂದವರು ವಿವರಿಸಿದ್ದಾರೆ.