
25 ವರ್ಷದ ಪರಿಸರ ಸೇವೆಗೆ ಗೌರವ: ಉಮಾಪತಿ ಭಟ್ ಅವರಿಗೆ ಸನ್ಮಾನ
News Details
ಕಳೆದ 25 ವರ್ಷಗಳಿಂದ ಪರಿಸರ ಸೇವೆಯಲ್ಲಿ ತೊಡಗಿರುವ ಶಿರಸಿಯ ಉಮಾಪತಿ ಭಟ್ ಕೆವಿ ಅವರಿಗೆ ಈ ಬಾರಿಯ ವಸುಂಧರಾ ಚಲನಚಿತ್ರೋತ್ಸವದ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತಿದೆ.
ಉಮಾಪತಿ ಭಟ್ಟ ಅವರು ಯೂತ್ ಫಾರ್ ಸೇವಾ ಸಂಸ್ಥೆಯ ಪರಿಸರ ವಿಭಾಗದ ರಾಜ್ಯ ಸಂಯೋಜಕರಾಗಿದ್ದಾರೆ. ಯುವಕರಿಗಾಗಿ ಪರಿಸರ ಶಿಕ್ಷಣ, ಮಕ್ಕಳಗಾಗಿ ಹಸಿರು ಪಯಣ, ನಿಸರ್ಗ ಜ್ಞಾನ ಶಿಕ್ಷಣ, ಟೆರಸ್ ಗಾರ್ಡನ್ ತರಬೇತಿ, ಪಕ್ಷಿ ವೀಕ್ಷಣಾ ತರಬೇತಿ, ಜೀವ ವೈವಿಧ್ಯ ಮಾಹಿತಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಉಮಾಪತಿ ಭಟ್ಟರು ಆಯೋಜಿಸಿದ್ದಾರೆ. ಹಸಿರು ಆಹಾರ, ಹಸಿರು ಆರೋಗ್ಯ ತರಬೇತಿ, ಮನೆಮದ್ದು ತರಬೇತಿಗಳನ್ನು ಅವರು ನಡೆಸಿದ್ದಾರೆ.
ಇದಲ್ಲದೇ 140 ಕಡೆಗಳಲ್ಲಿ ನವಗ್ರಹ ವನ, ವಿವಿಧ ಕಡೆ ಸಂಗೀತ ಸ್ವರವನ, ತೀರ್ಥಂಕರರ ವನ, ಕುಟುಂಬ ವನ, ಅಶೋಕ ವನ, ಅಕ್ಷರ ವನ, ಶ್ರೀ ಮಾರಿಕಾಂಬಾ ವನ ನಿರ್ಮಾಣ ಮಾಡಿದ್ದಾರೆ. ವಿಶೇಷವಾಗಿ ಚೌಗು ಭೂಮಿ ಉಳಿಸಿ ಆಂದೋಲನ ನಡೆಸಿದ್ದಾರೆ. ದೇವರಕಾಡು ನವ ನಿರ್ಮಾಣ ಅವರ ಸಾಧನೆ.
ಪರಿಸರ ಕ್ಷೇತ್ರದಲ್ಲಿನ ಅವರ ಈ ಎಲ್ಲಾ ಸೇವೆ ಗಮನಿಸಿ `ವಸುಂಧರಾ ಸನ್ಮಾನ ಪರಿಸರ ಪ್ರಶಸ್ತಿ'ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಏ 22ರಂದು ಕೊಪ್ಪಳದಲ್ಲಿ ನಡೆಯುವ ವಸುಂಧರಾ ಚಲನಚಿತ್ರೋತ್ಸವದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ.