
ಅಂಕೋಲಾದಲ್ಲಿ ಅಪರೂಪದ ಬಿಳಿ ಕಾಳಿಂಗ ಸರ್ಪ ಪತ್ತೆ, ಅರಣ್ಯ ಸಿಬ್ಬಂದಿಯಿಂದ ಸುರಕ್ಷಿತವಾಗಿ ಕಾಡಿಗೆ ಬಿಡುಗಡೆ
News Details
ಅತ್ಯoತ ವಿಷಕಾರಿ ಹಾವುಗಳಲ್ಲಿ ಕಾಳಿಂಗ ಸರ್ಪವೂ ಒಂದಾಗಿದ್ದು, ಅಂಕೋಲಾದಲ್ಲಿ ಅಪರೂಪದ ಬಿಳಿ ಬಣ್ಣದ ಕಾಳಿಂಗ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿದ ಹಾವನ್ನು ಅರಣ್ಯ ಸಿಬ್ಬಂದಿ ಹಾಗೂ ಉರಗ ತಜ್ಞರು ಸೇರಿ ಹರಸಾಹಸದಿಂದ ಹಿಡಿದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಪ್ಪು ಬಣ್ಣದ ಕಾಳಿಂಗ ಸರ್ಪ ಸಾಮಾನ್ಯ. ಆದರೆ, ಬಿಳಿ ಬಣ್ಣದ ಸರ್ಪವನ್ನು ನೋಡಿದವರಿರಲಿಲ್ಲ. ಅಂಕೋಲಾದ ಸುಂಕಸಾಳದಲ್ಲಿ ಈ ಅಪರೂಪದ ಕಾಳಿಂಗ ಕಾಣಿಸಿಕೊಂಡಿದ್ದು, ಅಲ್ಲಿನ ಜನ ಆತಂಕದಿoದಲೇ ಕಣ್ತುಂಬಿಕೊoಡರು. ಇಲ್ಲಿನ ಪ್ರದೀಪ್ ದೇಶಭಂಡಾರಿ ಅವರ ಮನೆ ಬಳಿ ಈ ದಿನ ಕಾಳಿಂಗ ಆಗಮಿಸಿತ್ತು. ಅದನ್ನು ನೋಡಿದ ಮನೆಯವರು ಆಘಾತಕ್ಕೆ ಒಳಗಾಗಿದ್ದರು. ಅವರ್ಸಾದ ಮಹೇಶ ನಾಯ್ಕ ಹಾಗೂ ಗಗನ ನಾಯ್ಕ ಆಗಮಿಸಿ ಜನರ ಭಯ ದೂರ ಮಾಡಿದರು.
ಈ ಹಾವು ಮೊದಲು ಸುಲಭವಾಗಿ ಕೈಗೆ ಸಿಗಲಿಲ್ಲ. ಉರಗ ತಜ್ಞರು ಹೂಡಿದ ಎಲ್ಲಾ ತಂತ್ರಗಳು ಇಲ್ಲಿ ವಿಫಲವಾಗಿದ್ದವು. ಮೊದಲು ಮನೆ ಬಳಿಯಿದ್ದ ಹಾವು ಹಿಡಿಯಲು ಹೋದಾಗ ಸಮೀಪದ ಮರ ಏರಿತು. ಮರದಿಂದ ಕೆಳಗೆ ಇಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಥಮ ಹಂತದಲ್ಲಿ ಅದು ಪ್ರಯೋಜನಕ್ಕೆ ಬರಲಿಲ್ಲ. ಮರದಿಂದ ಇಳಿದ ನಂತರವೂ ಸಂದಿ-ಗೊoದಿಗಳಲ್ಲಿ ನುಸುಳಿ ಹಾವು ತಪ್ಪಿಸಿಕೊಂಡಿತು.
ಕಾಳಿoಗ ಬುಸುಗುಡುವ ಶಬ್ದ ಕೇಳಿ ಅಲ್ಲಿದ್ದವರ ಉಸಿರಾಟದ ಶಬ್ದ ಹೆಚ್ಚಾಯಿತು. ಎದುರಿಗೆ ಬಂದ ಜನರಿಗೆ ಆ ಹಾವು ಹೆಡೆ ಎತ್ತಿ ಹೆದರಿಸಿತು. ಪದೇ ಪದೇ ಆಕ್ರೋಶದಲ್ಲಿದ್ದ ಹಾವನ್ನು ಉರಗ ತಜ್ಞರು ಸಮಾಧಾನ ಮಾಡಿದರು. ಕೊನೆಗೆ ತಾವು ತಂದಿದ್ದ ಬೆತ್ತದ ರಿಂಗ್ ಹಾಗೂ ಹುಕ್ಕಿನ ನೆರವಿನಿಂದ ಹಾವು ಚೀಲದ ಒಳಗೆ ಬರುವಂತೆ ಪ್ರಯತ್ನಿಸಿದರು. ಆದರೆ, ಅದಕ್ಕೆ ಕಾಳಿಂಗ ಒಪ್ಪಲಿಲ್ಲ. ಒಮ್ಮೆ ಚೀಲದ ಬಳಿ ಬಂದಿದ್ದ ಹಾವು ಅಲ್ಲಿಂದ ತಪ್ಪಿಸಿಕೊಂಡು ಮತ್ತೊಂದು ಮರದತ್ತ ಸಾಗಿತು.
ಆ ಮರಕ್ಕೆ ಅಡ್ಡಲಾಗಿ ನಿಂತ ಮಹೇಶ ನಾಯ್ಕರು 20 ಅಡಿ ಉದ್ದದ ಪ್ಲಾಸ್ಟಿಕ್ ಪೈಪಿನಲ್ಲಿ ಹಾವು ನುಸುಳುವಂತೆ ಮಾಡಿದರು. ಹಾವು ಪೈಪಿನ ಒಳಗೆ ಪ್ರವೇಶಿಸಿದ ನಂತರ ಇನ್ನೊಂದು ತುದಿ ಬಂದ್ ಮಾಡಿ ಅದಕ್ಕೆ ಚೀಲ ಕಟ್ಟಿದರು. 10 ಅಡಿ ಉದ್ದದ ಹಾವನ್ನು ಹಿಡಿದು ಅವರು ಕಾಡಿಗೆ ಬಿಟ್ಟರು.