Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-23

ಸಿಇಟಿ ವೇಳೆ ಜನಿವಾರ ತಪಾಸಣೆ: ಬ್ರಾಹ್ಮಣ ಸಂಘಟನೆಗಳಿಂದ ರಾಜ್ಯದಾದ್ಯಂತ ಪ್ರತಿಭಟನೆ

News Details

ಶಿವಮೊಗ್ಗ ಹಾಗೂ ಬೀದರಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಬೇಕಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕೈ ಹಾಕಿದ ಅಧಿಕಾರಿಗಳ ವಿರುದ್ಧ ರಾಜ್ಯದ ಎಲ್ಲಡೆ ಪ್ರತಿಭಟನೆ ನಡೆಯುತ್ತಿದೆ. ಶಿರಸಿಯಲ್ಲಿ ಸಹ ವಿವಿಧ ಬ್ರಾಹ್ಮಣ ಸಂಘಟನೆಯವರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ.

ರಾಜ್ಯದಲ್ಲಿ ಹತ್ತು-ಹಲವು ಬ್ರಾಹ್ಮಣ ಸಂಘಟನೆಗಳಿದ್ದರೂ ಜನಿವಾರ ಪ್ರಕರಣದಿಂದಾಗಿ ಆ ಸಂಘಟನೆಗಳೆಲ್ಲವೂ ಒಂದಾಗಿದೆ. `ಜನಿವಾರ ಉಳಿಸಿ.. ಬ್ರಾಹ್ಮಣ್ಯ ಬೆಳಸಿ' ಎಂಬ ತತ್ವದ ಅಡಿ ಒಗ್ಗಟ್ಟು ಪ್ರದರ್ಶನ ನಡೆಸಿವೆ. ರಾಜ್ಯದ ವಿವಿಧ ಮಠಾಧೀಶರು ಸಹ ಜನಿವಾರ ಮುಟ್ಟಿದ ಪ್ರಕರಣವನ್ನು ಖಂಡಿಸಿ, ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಹೀಗಾಗಿ ಆಡಳಿತ ಪಕ್ಷದ ಶಾಸಕರು ಸಹ ಜನಿವಾರ ತುಂಡರಿಸಿದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇನ್ನೂ ವಿದ್ಯಾರ್ಥಿಗಳ ಜನಿವಾರ ತೆಗಿಸಿದ ಪ್ರಕರಣ ರಾಜ್ಯ ಸರ್ಕಾರಕ್ಕೂ ಇರುಸು-ಮುರುಸುಂಟು ಮಾಡಿದೆ. ಅದಾಗಿಯೂ ಜನಿವಾರ ಪ್ರಕರಣದ ಮುಖ್ಯ ರೂವಾರಿ ಯಾರು? ಎಂಬುದನ್ನು ಈವರೆಗೂ ಸರ್ಕಾರ ಬಹಿರಂಗಪಡಿಸಿಲ್ಲ. ಬದಲಾಗಿ, ಅತ್ಯಂತ ಕೆಳಹಂತದ ಅರೆಕಾಲಿಕ ನೌಕರರಾದ ಹೋಂ ಗಾರ್ಡ'ರನ್ನು ಈ ಪ್ರಕರಣದಲ್ಲಿ ಅಮಾನತು ಮಾಡಿ ಮರುದಿನವೇ ಅವರ ಸೇವೆ ಮತ್ತೆ ಪಡೆಯಲಾಗಿದೆ.

ಈ ಹಿನ್ನಲೆ ಶಿರಸಿಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಬ್ರಾಹ್ಮಣೇತರರು ಸಹ ಅದರಲ್ಲಿ ಭಾಗವಹಿಸಿ `ಹಿಂದುಗಳೆಲ್ಲರೂ ಒಂದು' ಎಂಬ ಸಂದೇಶ ಸಾರಿದರು. `ಹಿಂದು ಧರ್ಮಕ್ಕೆ ಜೈಯವಾಗಲಿ. ಸನಾತನ ಸಂಸ್ಕೃತಿ ಸದಾ ಇರಲಿ' ಎಂಬ ಘೋಷಣೆಗಳು ಕೇಳಿಸಿದವು. ವಿವಿಧ ಪಾಠಶಾಲೆಯ ವಿದ್ಯಾರ್ಥಿಗಳು, ಮಹಿಳೆಯರು ಸಹ ಈ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. ಸರಿ ಸುಮಾರು 3 ಸಾವಿರದಷ್ಟು ಜನ ಈ ಪ್ರತಿಭಟನಾ ಮೆರವಣಿಗೆಯಲ್ಲಿದ್ದರು.