
0:00:00
2025-04-23
ಹೊನ್ನಾವರ ಉಪ್ಪೋಣಿಯಲ್ಲಿ ಬಸ್-ಸ್ಕಾರ್ಪಿಯೋ ಅಪಘಾತ: ಇಬ್ಬರು ಸ್ಥಳದಲ್ಲೇ ದುರ್ಮರಣ
News Details
ಹೊನ್ನಾವರದ ಉಪ್ಪೋಣಿಯ ಬಳಿ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಸ್ಕಾರ್ಪಿಯೋ ಕಾರಿನ ನಡುವೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಮಂಗಳವಾರ ಮಧ್ಯಾಹ್ನ ಭಟ್ಕಳದಿಂದ ಶಿರಸಿ ಮಾರ್ಗವಾಗಿ ಈ ಬಸ್ಸು ಸಂಚರಿಸುತ್ತಿತ್ತು. ಸ್ಕಾರ್ಪಿಯೋ ಸಾಗರದಿಂದ ಮುರುಡೇಶ್ವರ ಕಡೆ ತೆರಳುತ್ತಿತ್ತು. ಎರಡು ವಾಹನ ವೇಗವಾಗಿ ಸಂಚರಿಸುತ್ತಿದ್ದರಿoದ ಭೀಕರ ಅಪಘಾತ ನಡೆಯಿತು. ಅಪಘಾತದಲ್ಲಿ ಕಾರಿನ ಮುಂದಿನ ಭಾಗ ನುಚ್ಚು ನೂರಾಯಿತು.
ಮುರುಡೇಶ್ವರದಲ್ಲಿ ಬುಧವಾರ ನಡೆಯಬೇಕಿದ್ದ ನಿಶ್ಚಿತಾರ್ಥದಲ್ಲಿ ಭಾಗವಹಿಸಲು ಬೆಂಗಳೂರಿನಿoದ ಐವರು ಹೊರಟಿದ್ದರು. ಆದರೆ, ಹೊನ್ನಾವರದ ಉಪ್ಪೋಣಿ ಬಳಿ ಕಾರಿಗೆ ಬಸ್ಸು ಗುದ್ದಿತು. ಅಪಘಾತದ ರಭಸಕ್ಕೆ ಬೆಂಗಳೂರಿನ ರಕ್ಷಿತ್ ಹಾಗೂ ಶ್ರೀನಿವಾಸ ಎಂಬಾತರು ಅಲ್ಲಿಯೇ ಕೊನೆ ಉಸಿರೆಳೆದರು.
ಉಳಿದ ಮೂವರು ಗಾಯಗೊಂಡಿದ್ದು, ಅವರೆಲ್ಲರೂ ಉಡುಪಿ ಆಸ್ಪತ್ರೆಗೆ ದಾಖಲಾದರು. ಬಸ್ಸಿನಲ್ಲಿದ್ದವರಿಗೂ ಕೆಲವರಿಗೆ ಗಾಯಗಳಾಗಿವೆ. ಹೊನ್ನಾವರ ಪೊಲೀಸರು ಸ್ಥಳ ಭೇಟಿ ನಡೆಸಿದ್ದಾರೆ.