
ಶಿರಸಿ ಕೆಳಗಿನಕೇರಿ ರಸ್ತೆ ಬಿಕ್ಕಟ್ಟು: ಜಿಲ್ಲಾಡಳಿತ ಸೂಚನೆಗೆ ಇಂಜಿನಿಯರಿಂಗ್ ವಿಭಾಗ ನಿರ್ಲಕ್ಷ್ಯ
News Details
ಶಿರಸಿ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಆದರೆ, ಶಿರಸಿ ಪಂಚಾಯತ್ ರಾಜ್ ಇಂಜೀನಿಯರಿoಗ್ ವಿಭಾಗ ಮಾತ್ರ ಜಿಲ್ಲಾಡಳಿತದ ಸೂಚನೆಗೆ ಖ್ಯಾರೇ ಎನ್ನುತ್ತಿಲ್ಲ!
ಕೆಳಗಿನಕೇರಿ ಜನರ ಸಮಸ್ಯೆಗಳ ಬಗ್ಗೆ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಈ ಹಿನ್ನಲೆ ಅಪರ ಜಿಲ್ಲಾಧಿಕಾರಿ ತುರ್ತು ಕ್ರಮಕ್ಕಾಗಿ ಶಿರಸಿ ಪಂಚಾಯತ್ ರಾಜ್ ಇಂಜೀನಿಯರಿoಗ್ ವಿಭಾಗಕ್ಕೆ ಪತ್ರ ಬರೆದಿದ್ದರು. ಆದರೆ, ಈ ಪತ್ರ ಬರೆದು ಒಂದು ತಿಂಗಳಾದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಆ ಪತ್ರಕ್ಕೆ ನಿಯಮಾನುಸಾರ ಹಿಂಬರಹ ನೀಡುವ ಕೆಲಸವನ್ನು ಸಹ ಮಾಡಿಲ್ಲ!
ಈ ಹಿನ್ನಲೆ ಏಪ್ರಿಲ್ 28ರಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಅನಂತಮೂರ್ತಿ ಹೆಗಡೆ ಅಹೋರಾತ್ರಿ ಧರಣೆ ನಡೆಸಲು ನಿರ್ಧರಿಸಿದ್ದಾರೆ. `ಜಿಲ್ಲಾಧಿಕಾರಿ ಆದೇಶ ನೀಡಿ ತಿಂಗಳು ಕಳೆದರೂ ಮತ್ತಿಘಟ್ಟಾ ಕೆಳಗಿನಕೇರಿ ಶಾಶ್ವತ ರಸ್ತೆ ನಿರ್ಮಾಣ ಕುರಿತಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿಲ್ಲ. ಶಾಸಕರೂ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸದ್ಯದಲ್ಲಿಯೇ ಮಳೆಗಾಲ ಆರಂಭವಾಗಲಿದ್ದು, ಆ ಭಾಗದ ಜನರ ಸ್ಥಿತಿಗೆ ಯಾರು ಹೊಣೆ ಹೊರುತ್ತಾರೆ?' ಎಂದು ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ. `ಮತ್ತಿಘಟ್ಟಾ ಕೆಳಗಿನಕೇರಿ ಭಾಗದಲ್ಲಿ ಉಂಟಾದ ಭೂಕುಸಿತ ಅವಾಂತರದ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರೂ ಶಾಸಕರು ಕ್ರಮ ಜರುಗಿಸಿಲ್ಲ' ಎಂದು ಆರೋಪಿಸಿದ್ದಾರೆ.