
ಕಾರವಾರ: ಟಾಕ್ಸಿ ಚಾಲಕನ ಮನೆಗೆ ದಾಳಿ, ಬ್ಯೂಟಿ ಪಾರ್ಲರ್ ಮಾಲಕಿ ಸೇರಿದಂತೆ ನಾಲ್ವರು ಕಳ್ಳರು ಬಂಧನ
News Details
ಕಾರವಾರದ ಟಾಕ್ಸಿ ಚಾಲಕನ ಮನೆಗೆ ನುಗ್ಗಿ ಪ್ಯಾಂಟು-ಚಡ್ಡಿಯನ್ನು ಬಿಡದೇ ಕದ್ದು ಪರಾರಿಯಾಗಿದ್ದ ಬ್ಯೂಟಿ ಪಾರ್ಲರ್ ಮಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಜೊತೆ ಮತ್ತೆ ಮೂವರು ಕಳ್ಳರು ಸಿಕ್ಕಿ ಬಿದ್ದಿದ್ದಾರೆ.
ಮಾರ್ಚ 23ರಂದು ಕಾರವಾರದ ಸದಾಶಿವಗಡದ ಗೋಸಾವಿವಾಡದಲ್ಲಿರುವ ಚಾಲಕ ಸ್ಟವಿ ಗುಡಿನೋ ಮನೆಯಲ್ಲಿ ಕಳ್ಳತನ ನಡೆದಿತ್ತು. ಆರುವರೆ ಲಕ್ಷ ರೂ ಮೌಲ್ಯದ ಬಂಗಾರದ ಜೊತೆ ಚಾಲಕ ಬಳಸುತ್ತಿದ್ದ ಚಡ್ಡಿ-ಪ್ಯಾಂಟನ್ನು ಕಳ್ಳರು ದೋಚಿದ್ದರು. ಕಳ್ಳತನ ನಡೆಯುವ ವೇಳೆ ಕುಟುಂಬದವರೆಲ್ಲರೂ ಮನೆಯಲ್ಲಿಯೇ ಇದ್ದರೂ ಕಳ್ಳರು ಬಂದಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಕಳ್ಳರ ಬಗ್ಗೆ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ.
ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ಈ ಪ್ರಕರಣದ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಚಿನ್ನದ ನೆಕ್ಲೇಸ್, ಮಂಗಳಸೂತ್ರ, ಬಳೆ, ಉಂಗುರ, ಲಾಕೇಟ್ ಇದ್ದ ಚೈನ್, 3 ಸಾವಿರ ರೂ ಹಣ ಹಾಗೂ ಮೊಬೈಲನ್ನು ದೋಚಿದ ಕಳ್ಳರ ಪತ್ತೆಗೆ ಅವರು ಹುಡುಕಾಟ ನಡೆಸಿದ್ದರು. ಚಿತ್ತಾಕುಲ ಪೊಲೀಸರ ಸಹಾಯದಿಂದ ವಿವಿಧ ಕಡೆಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಇಕೋ ಕಾರು ಕಾಣಿಸಿತು. ಆ ಕಾರಿನಲ್ಲಿ ಬಂದವರ ಮೇಲೆ ಅನುಮಾನ ಮೂಡಿತು. ಕಾರು ಬೆನ್ನತ್ತಿ ಹೋದ ಪೊಲೀಸರಿಗೆ ಮಹಾರಾಷ್ಟದ ಸೊಲ್ಲಾಪುರ ಬಳಿಯ ಬಿಸ್ಮಿಲ್ಲಾನಗರದಲ್ಲಿ ಬ್ಯುಟಿ ಪಾರ್ಲರ್ ನಡೆಸುವ ಪದ್ಮಿನಿ ಕಾಳೆ ಸಿಕ್ಕಿ ಬಿದ್ದರು.
ಗೋವಾದ ವಸೀಮ್ ಅಹ್ಮದ್ ಹಾಗೂ ಮಹಾರಾಷ್ಟದ ಅಜೀಲ್ ಬೋಸಲೆ ಸಹಾಯಪಡೆದು ಪದ್ಮಿನಿ ಕಾಳೆ ಕಳ್ಳತನ ನಡೆಸಿರುವುದು ಗೊತ್ತಾಯಿತು. ಇದರೊಂದಿಗೆ ಇನ್ನೊಬ್ಬ ಆರೋಪಿಯೂ ಇದ್ದು, ಆತನನ್ನು ಕೊಲ್ಲಾಪುರದಲ್ಲಿ ಪೊಲೀಸರು ವಶಕ್ಕೆಪಡೆದರು.