
ಶಿರಸಿ: ಕಮಿಷನ್ ಆಶೆಗೆ ಮಟ್ಕಾ ಆಡಿಸಿದ್ದ ಶಂಕರ ಪಟಗಾರ ಬಂಧನ
News Details
ಶಿರಸಿ ಎಕ್ಕಂಬಿಯ ಕಾಟೆಮನೆಗೆ ಹೋಗುವ ಕ್ರಾಸಿನಲ್ಲಿ ಮಟ್ಕಾ ಆಡಿಸುತ್ತಿದ್ದ ಶಂಕರ ಪಟಗಾರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಮಟ್ಕಾ ಬುಕ್ಕಿ ರಾಘು ಶೆಟ್ಟಿ ಕಮಿಶನ್ ಆಸೆ ತೋರಿಸಿದ್ದರಿಂದ ಈ ಕೆಲಸ ಮಾಡುತ್ತಿರುವುದಾಗಿ ಶಂಕರ ಪಟಗಾರ ಬಾಯ್ಬಿಟ್ಟಿದ್ದಾರೆ.
ಶಿರಸಿ ಶಾಂತಿನಗರದ ಶಂಕರ ಪಟಗಾರ (50) ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡಿಕೊಂಡಿದ್ದರು. ಆ ವ್ಯಾಪಾರದಿಂದ ಜೀವನ ನಡೆಸುವುದು ಕಷ್ಟವಾಗಿದ್ದರಿಂದ ಅವರು ಸೊರಗಿದ್ದರು. ಆಗ, ರಾಘು ಶೆಟ್ಟಿ ಅವರ ಮಟ್ಕಾ ಕಮಿಶನ್ ಆಸೆ ಶಂಕರ್ ಪಟಗಾರ್ ಅವರಿಗೆ ಆಸರೆಯಾಯಿತು. ಹೀಗಾಗಿ ಶಂಕರ ಪಟಗಾರ್ ಅವರು ಕಮಿಶನ್ ಆಧಾರದಲ್ಲಿ ಮಟ್ಕಾ ಆಡಿಸುವುದನ್ನು ರೂಢಿಸಿಕೊಂಡಿದ್ದರು.
ಆದರೆ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಅವರು ಇದನ್ನು ಸಹಿಸಿಕೊಳ್ಳಲಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಕ್ರೀಡೆ ನಡೆಯುತ್ತಿರುವ ಬಗ್ಗೆ ಅರಿತು ಅವರು ಏಪ್ರಿಲ್ 21ರ ರಾತ್ರಿ ಶಂಕರ್ ಪಟಗಾರ ಅವರ ಮೇಲೆ ದಾಳಿ ಮಾಡಿದರು. ಕಾಟೆಮನೆ ಬಳಿಯಿರುವ ಚರ್ಚಿನ ಹತ್ತಿರ ಮಟ್ಕಾ ಆಡಿಸುತ್ತಿದ್ದ ಶಂಕರ ಪಟಗಾರ ಅವರು ಪೊಲೀಸರ ದಾಳಿಗೆ ತತ್ತರಿಸಿ ಹೋದರು.
1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಆ ದಿನ ಜನರಿಂದ ಸಂಗ್ರಹಿಸಿದ್ದ 1200ರೂಪಾಯಿಯನ್ನು ಅವರು ಪೊಲೀಸರಿಗೆ ಒಪ್ಪಿಸಿದರು. `ಇದರಲ್ಲಿ ನಂದೇನೂ ತಪ್ಪಿಲ್ಲ' ಎನ್ನುತ್ತ ರಾಘು ಶೆಟ್ಟಿ ಅವರ ಹೆಸರು ಹೇಳಿದರು. ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನುಕ್ರಮ ಜರುಗಿಸಿದರು.