
ಯಲ್ಲಾಪುರದ ಸಂತೋಷ ಮರಾಠಿಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ
News Details
ದೇಶದ ನಾನಾ ಭಾಗಗಳಿಂದ ಭಾಗವಹಿಸಿದ್ದ 1620ಕ್ಕೂ ಅಧಿಕ ಓಟಗಾರರರ ಜೊತೆ ಸ್ಪರ್ಧಿಸಿದ್ದ ಯಲ್ಲಾಪುರದ ಸಂತೋಷ ಮರಾಠಿ ಚಿನ್ನದ ಪದಕ ಗೆದ್ದಿದ್ದಾರೆ.
ಏಪ್ರಿಲ್ 21ರಿಂದ ಮೂರು ದಿನಗಳ ಕಾಲ ಮೈಸೂರಿನ ಚಾಮುಂಡಿ ವಿಹಾರ್ ಸ್ಟೇಡಿಯಂ'ನಲ್ಲಿ ರಾಷ್ಟ್ರೀಯ ವೆಟರನ್ ಅಥ್ಲೆಟಿಕ್ ಚಾಂಪಿಯನ್‌ಶಿಫ್ ನಡೆಯಿತು. ವೆಟರನ್ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 44 ನೇ ರಾಷ್ಟ್ರೀಯ ವೆಟರನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಇದಾಗಿತ್ತು. ತಮಿಳುನಾಡು, ಕೇರಳ, ಪಂಜಾಬ್, ಛತ್ತೀಸ್ಗಡ, ಹರಿಯಾಣ ಭಾಗದ ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಯಲ್ಲಾಪುರ ಬೆಡಸಗದ್ದೆಯ ಸಂತೋಷ ಮರಾಠಿ ಅವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.
1500 ಮೀಟರ್ ಓಟದ ಸ್ಪರ್ಧೆ ಹಾಗೂ ಲಾಂಗ್ ಜಂಪ್ ವಿಭಾಗದಲ್ಲಿ ಸಂತೋಷ ಮರಾಠಿ ಅವರು 4ನೇ ಸ್ಥಾನಪಡೆದರು. 4*4000ಮೀ ಓಟದಲ್ಲಿ ಬೆಳ್ಳಿ ಪದಕ ಪಡೆದರು. 4*100 ರಿಲೆಯಲ್ಲಿ ಅವರು ಬಂಗಾರ ಪದಕ ಪಡೆಯುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು. `ಯಲ್ಲಾಪುರದ ಕ್ರೀಡಾ ತರಬೇತುದಾರ ಜಿ ಎಂ ತಾಂಡುರಾಯನ್ ಅವರಲ್ಲಿ ತರಬೇತಿಪಡೆದಿದ್ದರಿಂದ ಈ ಸಾಧನೆ ಸಾಧ್ಯವಾಯಿತು' ಎಂದು ಸಂತೋಷ ಮರಾಠಿ ಅವರು ತಮ್ಮ ಗುರುಗಳನ್ನು ಸ್ಮರಿಸಿದರು.
ಈ ಹಿಂದೆ ದಕ್ಷಿಣ ಏಷ್ಯಾದ ಮಾಸ್ಟರ್ ಅಥ್ಲೆಟಿಕ್ ಓಪನ್ ಚಾಂಪಿಯನ್‌ಶಿಪ್'ನ ಸಹ ಸಂತೋಷ ಮರಾಠಿ ಅವರು ಬೆಳ್ಳಿ ಪದಕದ ಜೊತೆ ವಿವಿಧ ಬಹುಮಾನಗಳನ್ನು ಪಡೆದಿದ್ದರು. ಕ್ರೀಡಾ ಪ್ರೋತ್ಸಾಹಕರಾದ ಅಶೋಕ್ ನಾಯಕ್, ಮಹೇಶ ಆಲ್ಮತ್ತ, ಗಣೇಶಚಂದ್ರ ಪಂಡರಾಪುರ, ಅನಂತ ದೇವಕರ್, ಮಹದೇವಚಂದ್ರ ಪಂಡ್ರಾಪುರ, ಶಾಮೊಕ್ ಪಾಟೀಲ್, ಸುಧೀರ್ ಆಚಾರ್ಯ, ರಾಜೇಶ್ವರಿ ಶಿರೂರು, ಕಲ್ಪನಾ ಗಜಾನನ ನಾಯ್ಕ, ಶಿವಲಿಂಗಯ್ಯ ಎಸ್ ಅಲ್ಲಯ್ಯನವರಮಠ ಅವರು ಸಂತೋಷ ಮರಾಠಿ ಅವರ ಸಾಧನೆಗೆ ಸಂತಸವ್ಯಕ್ತಪಡಿಸಿದರು.