
ಅರಣ್ಯ ಹಕ್ಕು ಕ್ಷೇತ್ರದಲ್ಲಿ ಗುಂಡಿ ತೋಡು: ಹೋರಾಟಗಾರರ ಖಂಡನೆ
News Details
ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿ ಕಾಡು ಗಿಡ ನೆಡಲು ಗುಂಡಿ ತೋಡಿದ್ದು, ಹೋರಾಟಗಾರರ ವೇದಿಕೆ ಇದನ್ನು ಖಂಡಿಸಿದೆ. ಹೊನ್ನಾವರದ ವಿವಿಧ ಕಡೆ ಅರಣ್ಯ ಇಲಾಖೆ ಗುಂಡಿ ತೋಡಿರುವುದಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಅಸಮಧಾನ ಹೊರಹಾಕಿದ್ದಾರೆ.
ಗುರುವಾರ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಅವರ ಸಹಚರರು ಗುಂಡಿ ತೆಗೆದ ಕ್ಷೇತ್ರ ಸರ್ವೇ ನಡೆಸಿದರು. ಗುಂಡಿಯ ಆಳ-ಅಗಲ ವೀಕ್ಷಿಸಿದ ಅವರು ಅರಣ್ಯ ಸಿಬ್ಬಂದಿ ನಡವಳಿಕೆಯನ್ನು ಪ್ರಶ್ನಿಸಿದರು. `ಅರಣ್ಯವಾಸಿಗಳ ಸಾಗುವಳಿಗೆಗೆ ಆತಂಕ ಮಾಡದಂತೆ ನಿರ್ದೇಶನ ನೀಡಬೇಕು' ಎಂದು ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದರು.
ಆ ಭಾಗದ ಸಹಾಯಕ ಸಂರಕ್ಷಣಾಧಿಕಾರಿ ಲೋಹಿತ ಅವರನ್ನು ಹೋರಾಟಗಾರರು ಭೇಟಿ ಮಾಡಿ ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು. ಮುಂದಿನ 8 ದಿನದ ಒಳಗೆ ಸೂಕ್ತ ಕ್ರಮ ಜರುಗಿಸದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಹೊನ್ನಾವರದ ಸಾಲ್ಕೋಡ, ಜಲವಳ್ಳಿ ಕರ್ಕಿ, ಮಾಗೋಡ ಭಾಗದ ಜನರು ಇದಕ್ಕೆ ಧ್ವನಿಗೂಡಿಸಿದರು.
ಹೋರಾಟ ವೇದಿಕೆ ನಿಯೋಗದಲ್ಲಿ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಪ್ರಮುಖರಾದ ವಿನೋದ ನಾಯ್ಕ ಯಲ್ಕೊಟಗಿ, ಸುರೇಶ ನಗರಬಸ್ತಿಕೇರಿ, ಲಂಬೋದರ ನಾಯ್ಕ, ಮಾದೇವ ಮರಾಠಿ, ಅನಿತಾ ಲೋಫೀಸ್, ಸಂತೋಷ ನಾಯ್ಕ, ಶಾಂತಾನ್ ಪಿಂಟೋ, ಮೋಹನ ನಾಯ್ಕ, ವಿಘೇಶ್ವರ ಹೆರಂಗಡಿ, ಜನಾರ್ಧನ ನಾಯ್ಕ, ಥಾಮಸ ಲೋಬೋ, ಗಣೇಶ ನಾಯ್ಕ, ಚಂದ್ರಹಾಸ ನಾಯ್ಕ, ಹೇಮಲತಾ ನಾಯ್ಕ ಸಹ ಜೊತೆಗಿದ್ದರು.