
ಪಹಲ್ಗಾಂ ದಾಳಿ: ಶೋಭಾ ಹೆಗಡೆ ಕುಟುಂಬ ಕೂದಲೆಳೆಯ ಅಂತರದಿಂದ ಪಾರ
News Details
ಕಾಶ್ಮೀರದ ಪಹಲಗ್ಗಾಂ'ನಲ್ಲಿ ಉಗ್ರರು ಹೊಡೆದ ಗುಂಡು ಶೋಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಿoದ ಅವರು ಪಾರಾಗಿ ಬಂದಿದ್ದಾರೆ. ಅವರ ಪತಿ ಪ್ರದೀಪ ಹೆಗಡೆ, ಪುತ್ರ ಸಿದ್ದಾಂತ ಹೆಗಡೆ ಸಹ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮರುಜನ್ಮ ಪಡೆದಿದ್ದಾರೆ.
ಶಿರಸಿ ಗುಬ್ಬಿಗದ್ದೆಯ ಪ್ರದೀಪ ಹೆಗಡೆ ಅವರು ಕುಟುಂಬದವರ ಜೊತೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಇಲ್ಲಿನ ನೇಸರ್ ಟೂರ್ಸ ಅವರು ಆ ಕುಟುಂಬದವರನ್ನು ಪಹಲ್ಗಾಮ್ ಪ್ರದೇಶಕ್ಕೂ ಕರೆದೊಯ್ದಿದ್ದರು. ಏ 21ರಂದು ಕಾಶ್ಮೀರ ತಲುಪಿದ ಪ್ರದೀಪ ಹೆಗಡೆ ಕುಟುಂಬದವರು ಏ 22ರಂದು ಪಹಲ್ಗಾಮ್ ತಲುಪಿದರು. ಅಲ್ಲಿ ಕುದುರೆ ಏರಿ 7ಕಿಮೀ ದೂರದ ಬೈಸರಿನ್'ಗೆ ಹೊರಟರು. ಕೆಸರಿನ ದಾರಿಯಲ್ಲಿ ಅವರು 1.15ರ ವೇಳೆಗೆ ಬೈಸರಿನ್ ತಲುಪಿದ್ದು, ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.
ಅಲ್ಲಿ ಚಹ ಸೇವನೆಯಲ್ಲಿ ತೊಡಗಿರುವಾಗ ಎರಡು ಬಾರಿ ಗುಂಡಿನ ಸದ್ದು ಕೇಳಿತು. `ಯಾರೋ ಪಟಾಕಿ ಹೊಡೆದಿರಬಹುದು' ಎಂದು ಪ್ರದೀಪ ಹೆಗಡೆ ಕುಟುಂಬದವರು ಸುಮ್ಮನಿದ್ದರು. ಆ ವೇಳೆ, ಶೋಭಾ ಹೆಗಡೆ ಅವರ ಕಿವಿ ಅಂಚಿನಿAದ ಒಂದು ಗುಂಡು ಹಾರಿತು. ಪ್ರದೀಪ ಹೆಗಡೆ ಕುಟುಂಬದವರು ಫೋಟೋ ತೆಗೆಸಿಕೊಂಡಿದ್ದ ಸ್ಥಳದಲ್ಲಿ ಇಬ್ಬರು ಆಗಂತುಕರಿದ್ದರು. ಗನ್ ಹಿಡಿದು ಬರುತ್ತಿದ್ದ ಅವರನ್ನು ನೋಡಿ ಹೆಗಡೆ ಕುಟುಂಬದವರು ಆಘಾತಕ್ಕೆ ಒಳಗಾದರು. 100 ಮೀ ದೂರದಲ್ಲಿದ್ದ ಬಂದೂಕುದಾರಿಗಳನ್ನು ನೋಡಿದ ಹೆಗಡೆ ಕುಟುಂಬದವರು `ತಮ್ಮ ಜೀವನ ಮುಗಿಯಿತು' ಎಂದುಕೊoಡಿದ್ದರು.
ಅದಾಗಿಯೂ, ಸಮಯಪ್ರಜ್ಞೆ ಮೆರೆದ ಶೋಭಾ ಹೆಗಡೆ ಅವರು ಗೇಟಿನ ಕಡೆ ಓಡಿದರು. ಅವರ ಜೊತೆ ಇನ್ನೂ ನೂರಾರು ಜನ ತಪ್ಪಿಸಿಕೊಳ್ಳುವುದಕ್ಕಾಗಿ ಓಡುತ್ತಿದ್ದರು. ಪ್ರದೀಪ ಹೆಗಡೆ ಸಹ ತಮ್ಮ ಮಗನ ಕೈ ಹಿಡಿದು ಆ ಕಡೆ ಓಡಲು ಶುರು ಮಾಡಿದರು. 7 ಕಿಮೀ ಕೆಸರಿನ ಓಟ ಮುಗಿದಾಗ ಅಲ್ಲಿ ಇನ್ನಷ್ಟು ಜನ ಬಂದೂಕು ಹಿಡಿದು ನಿಂತಿದ್ದರು. ಅವರು ರಕ್ಷಣಾ ಸಿಬ್ಬಂದಿ ಎಂದು ಅರಿವಾದ ನಂತರ ಹೆಗಡೆ ಕುಟುಂಬದವರು ನಿಟ್ಟುಸುರು ಬಿಟ್ಟರು.
ಅಲ್ಲಿಂದ ಹೆಗಡೆ ಕುಟುಂಬದವರು ಶ್ರೀನಗರಕ್ಕೆ ಬಂದರು. ಮೊಬೈಲ್ ತೆಗೆದು ನೋಡಿದಾಗ ಭಯೋತ್ಪಾದಕರ ದಾಳಿಯ ಭೀಕರತೆ ಕಣ್ಣಮುಂದೆ ತೆರೆದುಕೊಂಡಿತು. ಕುದುರೆ ಏರಿ ಹೋಗಿದ್ದ ಅಧಿಕಾರಿಯೊಬ್ಬರು ಸಾವನಪ್ಪಿದ ವಿಷಯ ಕೇಳಿ ಬೆಚ್ಚಿಬಿದ್ದರು. ಕನ್ನಡಗರು ಸಹ ಸಾವನಪ್ಪಿರುವುದನ್ನು ಅರಿತು ಕಣ್ಣೀರಾದರು. ಕೊನೆಗೂ ಆ ಪ್ರವಾಸ ಮೊಟಕುಗೊಳಿಸಿ ಗುರುವಾರ ಹೆಗಡೆ ಕುಟುಂಬದವರು ಸುರಕ್ಷಿತವಾಗಿ ಬೆಂಗಳೂರು ತಲುಪಿದರು.