
ಯಲ್ಲಾಪುರ ಈಶ್ವರ ದೇವಾಲಯ ಪುನರ್ ಪ್ರತಿಷ್ಠಾ ಮಹೋತ್ಸವ ಮೇ 8ರಿಂದ 10ರ ವರೆಗೆ
News Details
ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾದ ಯಲ್ಲಾಪುರ ಪಟ್ಟಣದ ಈಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಜೋರಾಗಿದೆ. ಮೇ 8ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ.
ಕದಂಬರ ಕಾಲದಲ್ಲಿ ರಾಜರಿಂದ ಉಪಚಾರ ಪೂಜೆ ನಡೆಯುತ್ತಿದ್ದ ಇತಿಹಾಸ ಈ ದೇವಾಲಯಕ್ಕಿದೆ. ಸದ್ಯ ದೇವಸ್ಥಾನದ ಪುನರ್ ಪ್ರತಿಷ್ಠೆಯ ಕಾರ್ಯಕ್ರಮಗಳು ವೇ.ನಾರಾಯಣ ಭಟ್ಟ ಬೆಣ್ಣೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 3ರಂದು ನಿಧಿ ಕುಂಭಸೇವೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಭಕ್ತರು ಲೋಹವನ್ನು ಸಮರ್ಪಿಸಲು ಅವಕಾಶವಿದೆ. ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಮೇ 8ರಂದು ಆರಂಭಗೊಳ್ಳಲಿದೆ. ಮೇ 9ರಂದು ಬೆಳಗ್ಗೆ 10.10ಕ್ಕೆ ನೂತನ ಶಿವಲಿಂಗ ಪ್ರತಿಷ್ಠೆ, ನಂದಿ ಪ್ರತಿಷ್ಠೆ ಹಾಗೂ ನಾಗ ಪ್ರತಿಷ್ಠೆ ನಡೆಯಲಿದೆ. ಮೇ 10ರಂದು ಚಂಡಿಕಾ ಹವನ ನಡೆಯಲಿದ್ದು, 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಈಗಿರುವ ಮೂರ್ತಿ ಭಿನ್ನವಾದ ಹಿನ್ನೆಲೆಯಲ್ಲಿ ಹೊಸ ಶಿವಲಿಂಗ ಮೂರ್ತಿಯ ಪ್ರತಿಷ್ಠೆ ಕಾರ್ಯ ನಡೆಸಲಾಗುತ್ತಿದೆ. ಹೊಸ ಮೂರ್ತಿ 18 ಇಂಚು ದಪ್ಪ ಹಾಗೂ 4.5 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆಗೊಳ್ಳಲಿದೆ. ಅರುಣ ಗುಡಿಗಾರ ಹಾಗೂ ಸಂತೋಷ ಗುಡಿಗಾರ ಸಹೋದರರ ನೇತೃತ್ವದ ಕಲಾಕಾರರ ತಂಡ ಶಿವಲಿಂಗ, ನಂದಿ, ನಾಗ ದೇವರ ಮೂರ್ತಿಗಳನ್ನು ನಿರ್ಮಿಸಿದೆ. ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದೊಂದಿಗೆ ಶಿಲಾಮಯ ದೇವಸ್ಥಾನದ ನಿರ್ಮಾಣ ಮಾಡುವ ಯೋಜನೆಯೂ ಆಡಳಿತ ಮಂಡಳಿ ಮುಂದಿದೆ.
ಈ ಎಲ್ಲಾ ವಿಷಯಗಳ ಬಗ್ಗೆ ದೇವಸ್ಥಾನದ ಅಧ್ಯಕ್ಷ ಅಧ್ಯಕ್ಷ ಶೇಖರ ಶೇಟ್ ಮಾಹಿತಿ ನೀಡಿದರು. ದೇವಸ್ಥಾನದ ಆಡಳಿತ ಸಮಿತಿಯ ಖಜಾಂಚಿ ಸಂತೋಷ ಗುಡಿಗಾರ, ಕಾರ್ಯದರ್ಶಿ ಶಿವಪ್ರಕಾಶ ಕವಳಿ, ಸಹಕಾರ್ಯದರ್ಶಿ ಘನಶ್ಯಾಮ ವೆರ್ಣೆಕರ್, ಅರ್ಚಕ ನಾಗೇಂದ್ರ ಭಾಗ್ವತ ಶೇಡಿಜಡ್ಡಿ, ಸದಸ್ಯ ನಾಗರಾಜ ಮದ್ಗುಣಿ, ಅರುಣ ಗುಡಿಗಾರ ಜೊತೆಯಿದ್ದರು.