
ಮಂಗನ ಕಾಯಿಲೆಗೆ ಹೊನ್ನಾವರದ ವ್ಯಕ್ತಿ ಬಲಿ
News Details
ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಹೊನ್ನಾವರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
63 ವರ್ಷದ ತಿಮ್ಮಣ್ಣ ಹೆಗಡೆ ಅವರು ವಿವಿಧ ರೋಗಗಳಿಂದ ಬಳಲುತ್ತಿದ್ದರು. ಮಂಗನ ಕಾಯಿಲೆಯ ಲಕ್ಷಣಗಳಿದ್ದರೂ ಮೊದಲು ಅದು ಖಚಿತವಾಗಿರಲಿಲ್ಲ. ವಿವಿಧ ತಪಾಸಣೆಗಳ ನಂತರ ಏಪ್ರಿಲ್ 5ರಂದು ತಿಮ್ಮಣ್ಣ ಹೆಗಡೆ ಅವರಿಗೆ ಮಂಗನ ಕಾಯಿಲೆ ದೃಢವಾಗಿತ್ತು.
ತಿಮ್ಮಣ್ಣ ಹೆಗಡೆ ಅವರನ್ನು ಉಳಿಸಿಕೊಳ್ಳಲು ಕುಟುಂಬದವರು ಸಾಕಷ್ಟು ಪ್ರಯತ್ನ ನಡೆಸಿದರು. ವೈದ್ಯರು ಸಹ ನಿರಂತರ ಆರೈಕೆಯಲ್ಲಿ ತೊಡಗಿದ್ದರು. ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತಿಮ್ಮಣ್ಣ ಹೆಗಡೆ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅವರ ಆರೋಗ್ಯದಲ್ಲಿನ ಏರುಪೇರು ಮೊದಲಿನಂತೆಯೇ ಮುಂದುವರೆಯಿತು.
ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೇ ತಿಮ್ಮಣ್ಣ ಹೆಗಡೆ ಕೊನೆಉಸಿರೆಳೆದರು. `ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ವರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಅದರಲ್ಲಿ ಒಬ್ಬರು ಸಾವನಪ್ಪಿದ್ದಾರೆ. ಉಳಿದವರ ಆರೋಗ್ಯ ಸ್ಥಿರವಾಗಿದೆ' ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.