Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-28

ಕ್ಷೇಮಾ ಇನ್ಸುರೆನ್ಸ ಮೇಲೆ ಅಸಮಾಧಾನ: ಬೆಳೆ ವಿಮೆಗೆ ಅಡಿಕೆ ರೈತರ ಬೆಂಬಲ ಕಡಿಮೆ

News Details

ನ್ಯಾಯಯುತ ಪರಿಹಾರ ಪಾವತಿಸದೇ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಿದ ಕ್ಷೇಮಾ ಇನ್ಸುರೆನ್ಸ ಕಂಪನಿಯ ಮೇಲೆ ಅಡಿಕೆ ಬೆಳೆಗಾರರು ಮುನಿಸಿಕೊಂಡಿದ್ದಾರೆ. ಕಂಪನಿ ಮೇಲೆ ನಂಬಿಕೆ ಕಳೆದುಕೊಂಡಿದ್ದರಿoದ 2025-26ನೇ ಸಾಲಿನ ಬೆಳೆ ವಿಮೆ ಕಂತು ಪಾವತಿಗೆ ಅಡಿಕೆ ಬೆಳೆಗಾರರು ಆಸಕ್ತಿವಹಿಸಿಲ್ಲ.

ಕೇಂದ್ರ ಸರ್ಕಾರವೇ ಕ್ಷೇಮಾ ಕಂಪನಿಗೆ ಹಣ ಬಿಡುಗಡೆ ಮಾಡುವಂತೆ ಮೂರು ಬಾರಿ ಸೂಚನೆಯನ್ನು ನೀಡಿತ್ತು. ಅದೇ ಭರವಸೆಯಲ್ಲಿ `ಇನ್ನೂ ಏಳು ದಿನಗಳ ಒಳಗೆ ಅಡಿಕೆ ವಿಮಾ ಪರಿಹಾರ ಜಮಾ ಮಾಡಲಾಗುತ್ತದೆ' ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದರು. ಆದರೆ ಅದಾಗಿ ತಿಂಗಳು ಕಳೆದರೂ ಹಣ ಪಾವತಿ ಆಗಲಿಲ್ಲ. ಇದಕ್ಕೂ ಮುನ್ನ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ರೈತರಿಗೆ ನ್ಯಾಯ ಕೊಡಿಸಲು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ಅದು ಸಹ ಮುಂದುವರೆದಿಲ್ಲ. ಹೀಗಾಗಿ ವಿಮೆ ಹೆಸರಿನಲ್ಲಿ ಅಡಿಕೆ ಬೆಳೆಗಾರರ ಹಣಪಡೆದ ಕಂಪನಿ ಅದನ್ನು ಮರುಪಾವತಿ ಮಾಡಲಿಲ್ಲ.

ಕಳೆದ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದವು. ಹೀಗಾಗಿ ಹವಾಮಾನ ಆಧರಿತ ಬೆಳೆ ವಿಮೆಯ ಮೇಲೆ ರೈತರು ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದರು. ಆದರೆ, ಆ ಭರವಸೆ ಹುಸಿಯಾಯಿತು. ಡಿಸೆಂಬರ್ ಅಂತ್ಯದೊಳಗೆ ರೈತರ ಖಾತೆಗೆ ಹಣ ಜಮಾ ಆಗಬೇಕಿತ್ತು. ಮಳೆ ಮಾಪನ ಸರಿಯಾಗಿಲ್ಲ ಎಂಬ ಸಬೂಬು ನೀಡಿ ವಿಮಾ ಕಂಪನಿ ರೈತರಿಗೆ ಪರಿಹಾರ ನೀಡುತ್ತಿಲ್ಲ. ಮಳೆ ಮಾಪನದ ಆಡಿಟ್ ನಡೆಸುವ ಹೊಣೆಯೂ ಕಂಪನಿ ಮೇಲಿದ್ದರೂ ಅದನ್ನು ಸೂಕ್ತವಾಗಿ ನಿರ್ವಹಿಸಿಲ್ಲ.

ವಿಮಾ ಪರಿಹಾರಕ್ಕೆ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಹಕಾರಿ ಪ್ರತಿನಿಧಿಗಳು ಸಭೆ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಒತ್ತಡವನ್ನು ತಂದಿದ್ದಾರೆ. ಸ್ವತಃ ಕೇಂದ್ರ ಸರ್ಕಾರವೇ ಕಂಪನಿಗೆ ವಿಮೆ ಪಾವತಿಸುವಂತೆ ಆದೇಶಿಸಿದೆ. ಅದಾಗಿಯೂ ಕಂಪನಿ ತಲೆ ಕೆಡಿಸಿಕೊಂಡಿಲ್ಲ. ಹವಾಮಾನ ಆಧರಿತ ಬೆಳೆ ವಿಮೆ ಯೋಜನೆ ನಿರ್ವಹಣೆಗಾಗಿ ಕ್ಷೇಮಾ ಇನ್ಸುರೆನ್ಸ ಕಂಪನಿ 3 ವರ್ಷದ ಟೆಂಡರ್ ಪಡೆದಿದೆ. ಹವಾಮಾನ ವೈಪರಿತ್ಯದಿಂದ 2023ನೇ ಸಾಲಿನಲ್ಲಿ ರೈತರು ನಷ್ಟ ಅನುಭವಿಸಿದರೂ ಕಂಪನಿ ಪರಿಹಾರ ನೀಡಿಲ್ಲ. ಅದಾಗಿಯೂ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಆಡಳಿತದಲ್ಲಿರುವವರು ಆಸಕ್ತಿವಹಿಸಿಲ್ಲ. ಹೀಗಾಗಿ 2024-25ರ ವಿಮಾ ಯೋಜನೆಯ ಬಗ್ಗೆ ರೈತರು ಆಸಕ್ತರಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಡಿಕೆ ಬೆಳೆಗಾರರಿಗೆ ಎರಡು ವರ್ಷದ ವಿಮಾ ಪರಿಹಾರ ಎಂದು ಅಂದಾಜು 2150 ಕೋಟಿ ರೂ ಹಣವನ್ನು ಕಂಪನಿ ಪಾವತಿಸಬೇಕು. ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದರೂ ಆ ಹಣ ಬಿಡುಗಡೆ ಮಾಡದ ಕಾರಣ ಜನರಿಗೆ ಕಂಪನಿ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಹೀಗಾಗಿ 2025-26ರ ವಿಮೆ ಕಂತು ಕಟ್ಟಿದರೆ ತಾವು ಭರಿಸಿದ ವಂತಿಗೆ ಹಣ ಸಹ ಸಿಗುವುದಿಲ್ಲ ಎಂದು ರೈತರು ಮಾತನಾಡುತ್ತಿದ್ದಾರೆ.