
ವಿಕಲಾಂಗ ಅಬ್ದುಲ್ ಸತ್ತರ್ ಮಾನವೀಯತೆ: ಬಾಣಂತಿಗೆ ರಕ್ತದಾನ ಮಾಡಿ ಎರಡು ಜೀವ ಉಳಿಸಿ
News Details
ಎರಡು ಕಾಲು ಕಳೆದುಕೊಂಡರೂ ಸ್ವಾವಲಂಬಿ ಬದುಕಿಗಾಗಿ ಗೂಡಂಗಡಿ ನಡೆಸುವ ದಾಂಡೇಲಿಯ ಅಬ್ದುಲ್ ಸತ್ತರ್ ಅವರು ರಕ್ತಸ್ರಾವದಿಂದ ಬಳಲುತ್ತಿರುವ ಬಾಣಂತಿಗೆ ರಕ್ತ ನೀಡುವ ಮೂಲಕ ಎರಡು ಜೀವ ಕಾಪಾಡಿದ್ದಾರೆ.
ದಾಂಡೇಲಿಯ ವನಶ್ರೀ ನಗರದಲ್ಲಿ ಗೂಡಂಗಡಿ ಹೊಂದಿರುವ ಅಬ್ದುಲ್ ಸತ್ತಾರ್ ಅವರು ಬಾಲ್ಯದಲ್ಲಿಯೇ ತಮ್ಮ ಕಾಲು ಕಳೆದುಕೊಂಡಿದ್ದಾರೆ. ಅಂಗವೈಕಲ್ಯವನ್ನು ಮೆಟ್ಟಿನಿಂತು ಅವರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ನಡುವೆ ಅವಕಾಶ ಸಿಕ್ಕಾಗಲೆಲ್ಲ ನೊಂದವರಿಗೆ ನೆರವು ನೀಡಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹಳಿಯಾಳದ ಬಾಣಂತಿ ಸ್ವಾತಿ ಅವರ ಆರೈಕೆ ನಡೆಯುತ್ತಿದ್ದು, ಅವರು ರಕ್ತಸ್ರಾವದಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆಗೆ ಅವರಿಗೆ ಬಿ ಪಾಸಿಟವ್ ರಕ್ತ ಅಗತ್ಯವಿತ್ತು. ತೀವ್ರ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾಗಿರುವ ಬಗ್ಗೆ ಸಾಮಾಜಿಕ ತಾಣದಲ್ಲಿ ಸಂದೇಶ ಹರಿದಾಡುತ್ತಿತ್ತು. ಈ ವೇಳೆ ಅತ್ತರ್ ಸಯ್ಯದ್ ಅವರಿಗೆ ಪೋನ್ ಬಂದಿದ್ದು, 'ತಮ್ಮದು ಬಿ ಪಾಸಿಟಿವ್' ಎಂದು ಅವರು ದೃಢಪಡಿಸಿದರು.
ತಕ್ಷಣ ತಮ್ಮ ಮೂರು ಚಕ್ರದ ವಾಹನ ಏರಿ ಅವರು ಆಸ್ಪತ್ರೆ ಕಡೆ ದೌಡಾಯಿಸಿದರು. 10 ನಿಮಿಷದ ಒಳಗೆ ಆಸ್ಪತ್ರೆ ತಲುಪಿದರು. ಪರಿಚಯವೂ ಇಲ್ಲದ ಬಾಣಂತಿಗೆ ರಕ್ತ ನೀಡಿ ತಾಯಿ-ಮಗುವಿನ ಜೀವ ಕಾಪಾಡಿದರು. ಆ ಮೂಲಕ ಅಬ್ದುಲ್ ಸತ್ತಾರ್ ಅವರು ತಾವು ಕಷ್ಟದಲ್ಲಿದ್ದರೂ ಬೇರೆಯವರ ಕಷ್ಟಕ್ಕೆ ಸ್ಪಂದಿಸಿದರು.