
ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ: ಜಿಲ್ಲಾಧಿಕಾರಿ ಮಣ್ಣು ತೆರವು ಕಾರ್ಯಕ್ಕೆ ಸೂಚನೆ
News Details
ಅಂಕೋಲಾದ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವು ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಂದರು ಇಲಾಖೆಯ ಆಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಿದ ವಿಶೇಷ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವುಗೊಳಿಸುವ ಕಾರ್ಯವನ್ನು ನಿರ್ವಹಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಅದರಂತೆ ಒಂದು ವಾರದ ಒಳಗೆ ಎಲ್ಲಾ ಅಗತ್ಯ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಸೇರಿದಂತೆ ಎಲ್ಲಾ ಅನುಮತಿಗಳನ್ನು ಪಡೆದು ತಕ್ಷಣ ಮಣ್ಣು ತೆರವು ಕಾರ್ಯ ಆರಂಭಿಸಬೇಕು ಎಂದು ಡೀಸಿ ಸೂಚಿಸಿದರು. ನಿಗಧಿತ ಅವಧಿಯೊಳಗೆ ಮಣ್ಣು ತೆರವು ಕಾರ್ಯಚರಣೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಅವರು ಸೂಚನೆ ನೀಡಿದರು.
'ಮಣ್ಣು ತೆರವು ಕಾರ್ಯಚರಣೆಗೆ ಆಗಮಿಸುವ ಬಾರ್ಜ್ ಸಂಚಾರಕ್ಕೆ ನದಿಯಲ್ಲಿ ಯಾವುದೇ ಅಡಚಣೆಯಿಲ್ಲವಾಗಿದ್ದು, ನದಿಯಿಂದ ತೆರವುಗೊಳಿಸುವ ಮಣ್ಣನ್ನು ನಿಯಮಾವಳಿಗಳಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತೆರವು ಕಾರ್ಯಚರಣೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಬೇಕು' ಎಂದು ಸೂಚಿಸಿದರು.