Loading...
  • aksharakrantinagarajnaik@gmail.com
  • +91 8073197439
Total Visitors: 2789
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
13:07:00 2025-03-20

ಆರು ಸಭೆ, ಅನೇಕ ಹೋರಾಟ, ಸಾಕಷ್ಟು ಕಚ್ಚಾಟ-ವಾಗ್ವಾದ, ಪ್ರತಿಭಟನೆ ನಂತರ ಯಲ್ಲಾಪುರ ಪಟ್ಟಣ ಪಂಚಾಯತವೂ ಹಿಂದಿನ ಜಾತ್ರೆ ಲೆಕ್ಕಾಚಾರವನ್ನು ಸದಸ್ಯರ ಮುಂದಿಟ್ಟಿದೆ.

News Details

ಆರು ಸಭೆ, ಅನೇಕ ಹೋರಾಟ, ಸಾಕಷ್ಟು ಕಚ್ಚಾಟ-ವಾಗ್ವಾದ, ಪ್ರತಿಭಟನೆ ನಂತರ ಯಲ್ಲಾಪುರ ಪಟ್ಟಣ ಪಂಚಾಯತವೂ ಹಿಂದಿನ ಜಾತ್ರೆ ಲೆಕ್ಕಾಚಾರವನ್ನು ಸದಸ್ಯರ ಮುಂದಿಟ್ಟಿದೆ. ಮೇಲ್ನೋಟಕ್ಕೆ 11.88 ಲಕ್ಷ ರೂ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ಮಟ್ಟದಲ್ಲಿ ಈ ಅವ್ಯವಹಾರದ ಸಮಗ್ರ ತನಿಖೆಗೆ ಸದಸ್ಯರು ಒತ್ತಾಯಿಸಿದ್ದು, ಬುಧವಾರ ನಡೆದ ಸಭೆಯಲ್ಲಿ ಈ ಬಗ್ಗೆ ಠರಾವು ಮಾಡಲಾಗಿದೆ. ಜಾತ್ರೆ ಅಂಗವಾಗಿ ಯಲ್ಲಾಪುರದ ವಿವಿಧ ರಸ್ತೆ ಅಂಚಿನಲ್ಲಿ ಒಟ್ಟು 201 ಜಾಗವನ್ನು ಗುರುತು ಮಾಡಿ ಹರಾಜು ಹಾಕಲಾಗಿತ್ತು. ಆದರೆ, ಪ ಪಂ ಅಧಿಕಾರಿಗಳು 117 ಜಾಗ ಹರಾಜಾದ ಬಗ್ಗೆ ಮಾತ್ರ ದಾಖಲೆಗಳಲ್ಲಿ ನಮೂದಿಸಿದ್ದಾರೆ. ಕೆಲ ಜಾಗಗಳ ಹರಾಜು ನಡೆದ ಬಗ್ಗೆ ದಾಖಲೆಗಳಿಲ್ಲ. ಜೊತೆಗೆ ಹರಾಜು ಮೊತ್ತಕ್ಕಿಂತಲೂ ಕಡಿಮೆ ಪ್ರಮಾಣದ ಹಣವನ್ನು ಸರ್ಕಾರಕ್ಕೆ ಭರಣ ಮಾಡಿದ್ದಾರೆ. ಅದರಲ್ಲಿಯೂ ಏಳು ಹರಾಜುದಾರರು ಈವರೆಗೂ ಹಣ ಪಾವತಿ ಮಾಡದ ಬಗ್ಗೆ ಪ ಪಂ ಸಿಬ್ಬಂದಿ ಸಭೆಗೆ ಮಾಹಿತಿ ನೀಡಿದ್ದಾರೆ. ಯಲ್ಲಾಪುರದ ಜಾತ್ರೆ ಮುಗಿದು ಎರಡು ವರ್ಷ ಕಳೆದರೂ ಅಧಿಕಾರಿಗಳು ಲೆಕ್ಕಾಚಾರ ಮಂಡಿಸಿರಲಿಲ್ಲ. ಜಾತ್ರೆಯ ಲೆಕ್ಕಾಚಾರ ಕೊಡುವಂತೆ ಪ್ರತಿ ಸಭೆಯಲ್ಲಿಯೂ ಸದಸ್ಯರು ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನಲೆ ಬುಧವಾರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು, ಪ ಪಂ ಸಿಬ್ಬಂದಿ ಸಭೆಗೆ ಲೆಕ್ಕ ಒಪ್ಪಿಸಿದರು. ಹರಾಜು ಮಳಿಗೆಗಳ ಲೆಕ್ಕ ಬರೆದುತಂದಿದ್ದ ಸದಸ್ಯ ರಾಧಾಕೃಷ್ಣ ನಾಯ್ಕ ಅಧಿಕಾರಿಗಳು ನೀಡಿದ ಲೆಕ್ಕದೊಂದಿಗೆ ಅದನ್ನು ತಾಳೆ ಮಾಡಿದರು. ಆಗ, ಮೇಲ್ನೋಟಕ್ಕೆ 1188600ರೂ ವ್ಯತ್ಯಾಸದ ಹಣ ಕಾಣಿಸಿತು. ಎಲ್ಲರಿಗೂ ಒಂದು ನ್ಯಾಯ.. ಇಲ್ಲಿ ಮಾತ್ರ ಅನ್ಯಾಯ! ಇನ್ನೂ ಮುಂಡಗೋಡ ರಸ್ತೆಯಲ್ಲಿನ 6 ಮಳಿಗೆಗಳನ್ನು ಹರಾಜು ನಡೆಸದೇ ಕೆಲವರಿಗೆ 15 ಸಾವಿರ ರೂ ಬಾಡಿಗೆ ಆಧಾರದಲ್ಲಿ ನೀಡಿರುವುದು ಸಭೆಯ ಗಮನಕ್ಕೆ ಬಂದಿತು. ಈ ಬಗ್ಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಆಕ್ಷೇಪವ್ಯಕ್ತಪಡಿಸಿದರು. ಹರಾಜು ಕಮಿಟಿಯವರು ಎಲ್ಲಾ ಕಡೆ ಹರಾಜಿನ ಮೂಲಕ ಭೂಮಿ ಹಂಚಿಕೆ ಮಾಡಿದ್ದಾರೆ. ಆದರೆ, ಮುಂಡಗೋಡು ರಸ್ತೆಯ ಅಂಚಿನಲ್ಲಿ ಮಾತ್ರ ಹರಾಜು ಹಾಕದೇ ಮಳಿಗೆ ನಿರ್ಮಾಣಕ್ಕೆ ಕೊಟ್ಟಿರುವುದಕ್ಕೆ ಕಾರಣವೇನು? ಎಂದು ಸೋಮೇಶ್ವರ ನಾಯ್ಕ ಪ್ರಶ್ನಿಸಿದರು. ಆದರೆ, ಅದಕ್ಕೆ ಯಾರೂ ಸರಿಯಾಗಿ ಉತ್ತರಿಸಲಿಲ್ಲ. `ಇನ್ನಷ್ಟು ಆಳವಾಗಿ ತನಿಖೆ ನಡೆಸಿದಾಗ ಇನ್ನೂ ದೊಡ್ಡ ಮೊತ್ತದ ಅಕ್ರಮ ಬಯಲಿಗೆ ಬರಲಿದ್ದು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಈ ಹಗರಣದ ತನಿಖೆ ನಡೆಯಬೇಕು' ಎಂದು ಪ ಪಂ ಸದಸ್ಯ ಸತೀಶ ನಾಯ್ಕ ಪಟ್ಟುಹಿಡಿದರು. ಕೊನೆಗೆ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರ ಜೊತೆ ಚರ್ಚಿಸಿ, ಪ ಪಂ ಅಧ್ಯಕ್ಷೆ ನರ್ಮಾದಾ ನಾಯ್ಕ ಅವರು ಜಿಲ್ಲಾಧಿಕಾರಿ ಮಟ್ಟದ ತನಿಖೆಗೆ ಒಪ್ಪಿಗೆ ಸೂಚಿಸಿದರು. ಬ್ಯಾನರ್ ಲೆಕ್ಕಾಚಾರದಲ್ಲಿಯೂ ಅಪರಾತಪರಾ! ಯಲ್ಲಾಪುರ ಜಾತ್ರೆಯಲ್ಲಿ 400ಕ್ಕೂ ಅಧಿಕ ಶುಭಾಶಯ ಬ್ಯಾನರ್ ಅಳವಡಿಸಲಾಗಿದ್ದು, ಅವೆಲ್ಲವೂ ನಿಷೇಧಿತ ಪ್ಲಾಸ್ಟಿಕ್ ಬ್ಯಾನರ್ ಆಗಿದ್ದವು. ಅದಾಗಿಯೂ ಅನೇಕರು ಬ್ಯಾನರ್ ಅಳವಡಿಕೆಯ ಹಣವನ್ನು ಪಟ್ಟಣ ಪಂಚಾಯತಗೆ ಭರಿಸಿಲ್ಲ. 20 ಜನರ ಬ್ಯಾನರ್ ಅಳವಡಿಕೆಯಿಂದ 87 ಸಾವಿರ ರೂ ಮಾತ್ರ ಪಟ್ಟಣ ಪಂಚಾಯತಗೆ ಜಮಾ ಆಗಿದೆ. ಪ ಪಂ ಸದಸ್ಯರೊಬ್ಬರೇ 37 ಸಾವಿರ ರೂ ಹಣ ಜಮಾ ಮಾಡಿದ್ದಾರೆ. ಅನೇಕ ಪ್ರಭಾವಿಗಳು ಸೇರಿ ಸಣ್ಣಪುಟ್ಟ ಬ್ಯಾನರ್ ಅಳವಿಡಿಸಿದವರು ಹಣ ಪಾವತಿಸದ ಬಗ್ಗೆ ಚರ್ಚೆ ನಡೆಯಿತು. ಮುಂದಿನ ಜಾತ್ರೆಯಲ್ಲಿ ಈ ರೀತಿ ಆಗದಂತೆ ಎಚ್ಚರಿಕೆವಹಿಸುವ ಬಗ್ಗೆ ನಿರ್ಧರಿಸಲಾಯಿತು. ಆಡಳಿತ ವಿಷಯದಲ್ಲಿ ಸದಸ್ಯೆ ಪತಿಯ ಅಧಿಕಾರ! `ಯಲ್ಲಾಪುರ ಪಟ್ಟಣ ಪಂಚಾಯತದ ಮಹಿಳಾ ಸದಸ್ಯೆಯೊಬ್ಬರ ಪತಿ ಆಡಳಿತ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ' ಪ ಪಂ ಸದಸ್ಯ ಸಯ್ಯದ ಕೈಸರ್ ದೂರಿದರು. `ಅಭಿವೃದ್ಧಿ ವಿಷಯದಲ್ಲಿಯೂ ಅವರು ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ಸಹ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದಾರೆ' ಎಂದವರು ಆಕ್ಷೇಪಿಸಿದರು. `ಮಹಿಳಾ ಸದಸ್ಯರ ಹೆಸರು ಹೇಳಿದರೆ ಅವರಿಗೆ ಎಚ್ಚರಿಕೆ ನೀಡುವೆ' ಎಂದು ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಹೇಳಿದ್ದು, ಸಭೆ ಮುಗಿದ ನಂತರ ಸಯ್ಯದ್ ಕೈಸರ್ ಅಧ್ಯಕ್ಷರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದರು. ಬಹುತೇಕ ಸದಸ್ಯರ ಗೈರು! ಯಲ್ಲಾಪುರ ಜಾತ್ರೆ ಲೆಕ್ಕಾಚಾರ ಮಂಡಿಸುವ ಮಹತ್ವದ ಸಭೆಗೆ ಬಹುತೇಕ ಪ ಪಂ ಸದಸ್ಯರು ಗೈರಾಗಿದ್ದರು. ಪದೇ ಪದೇ ಜಾತ್ರೆ ಲೆಕ್ಕಾಚಾರ ಪ್ರಶ್ನಿಸುತ್ತಿದ್ದ ಸದಸ್ಯರನ್ನು ಹೊರತುಪಡಿಸಿ ಉಳಿದಂತೆ ಐದು ಸದಸ್ಯರು ಮಾತ್ರ ಸಭೆಯಲ್ಲಿ ಕಾಣಿಸಿಕೊಂಡರು. ಸಭೆಯಲ್ಲಿ ಭಾಗವಹಿಸಿದವರು ಅವ್ಯವಹಾರವಾದ ಹಣ ಮರುಭರಣವಾಗಬೇಕು ಎಂದು ಒತ್ತಾಯಿಸಿದರು