
ಶಿರೂರು ಗುಡ್ಡಕುಸಿತ: ಆರೋಪಿಗಳ ಬಂಧನವಾಗಿಲ್ಲವೆಂದು ಆಕ್ರೋಶ; ಮೇ 8ರಿಂದ ಉಪವಾಸ ಎಚ್ಚರಿಕೆ
News Details
ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ 11 ಜನರ ಸಾವಿಗೆ ಕಾರಣವಾದ ಐಆರ್‌ಬಿ ಕಂಪನಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ ತಿಂಗಳು ಕಳೆದರೂ ಒಬ್ಬರ ಬಂಧನವೂ ಆಗಿಲ್ಲ. ಈ ಬಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇ 8ರಿಂದ ಶಿರೂರಿನಲ್ಲಿ ಉಪವಾಸ ಕೂರುವುದಾಗಿ ಅವರು ಎಚ್ಚರಿಸಿದ್ದಾರೆ.
`ಶಿರೂರು ಗುಡ್ಡಕುಸಿತ ದುರಂತದಲ್ಲಿ ನ್ಯಾಯಾಲಯದ ಮೊರೆ ಹೋಗಿ ಐಆರ್‌ಬಿ ಕಂಪೆನಿಯ 8 ಮಂದಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೆ ಇದುವರೆಗೂ ಸಹ ಯಾವೊಬ್ಬ ಅಧಿಕಾರಿಯನ್ನು ಪೊಲೀಸರು ಬಂಧಿಸಿಲ್ಲ. ನಮ್ಮ ಯಾವುದೇ ಬೇಡಿಕೆ ಈಡೇರಿಲ್ಲ. ಪೊಲೀಸ್ ಅಧೀಕ್ಷಕರನ್ನು ಕೇಳಿದರೆ, ನೋಟಿಸ್ ನೀಡಿರುವುದಾಗಿ ಹೇಳಿದ್ದಾರೆ. ಕಠಿಣ ಕ್ರಮವಾಗದ ಹಿನ್ನಲೆ ಹೋರಾಟ ಅನಿವಾರ್ಯ' ಎಂದವರು ಸುದ್ದಿಗಾರರ ಜೊತೆ ವಿವರಿಸಿದರು.
`ಈ ಹಿಂದೆ ಐಆರ್‌ಬಿಯ 8 ಅಧಿಕಾರಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗಿತ್ತು. ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರೂ ಪರಿಹಾರ ಕೊಡಬೇಕು. ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆದಾಗ ನಿವೃತ್ತ ಪೊಲೀಸ್ ಅಧಿಕಾರಿ ಜಿಬಾವಾ ಐಆರ್‌ಬಿ ಜೊತೆ ರಾಜಿ ಮಾಡಿಸಿ ಪರಿಹಾರದ ಭರವಸೆ ನೀಡಿದ್ದರು. ಆದರೆ, ಅದು ಈಡೇರಿಲ್ಲ' ಎಂದು ಆಕ್ರೋಶವ್ಯಕ್ತಪಡಿಸಿದರು. `ಪರಿಹಾರ ವಿತರಿಸುವಂತೆ ಪಟ್ಟುಹಿಡಿದಾಗ ಸರ್ಕಾರದಿಂದ ಮೃತರ ಕುಟುಂಬಗಳಿಗೆ ನೀಡಿರುವ ಪರಿಹಾರದ ಹಣ ಐಆರ್‌ಬಿಯಿಂದಲೇ ಕೊಟ್ಟಿದ್ದಾಗಿದ್ದು, ಹೆಚ್ಚಿನ ಪರಿಹಾರ ಕೊಡುವುದು ಸಾಧ್ಯವಿಲ್ಲ ಎಂದು ಜಿ.ಬಾವಾ ಫೋನ್ ಕರೆ ಮಾಡಿ ಹೇಳಿದ್ದಾರೆ. ಇದರಿಂದ ಸಂತ್ರಸ್ತರಿಗೂ ನಿರಾಸೆಯಾಗಿದೆ' ಎಂದು ನೋವು ತೋಡಿಕೊಂಡರು.
ಮಾತು ಮರೆಯುವ ಪೊಲೀಸ್ ಅಧೀಕ್ಷಕ!
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ವಿರುದ್ಧವೂ ಸ್ವಾಮೀಜಿ ಕಿಡಿಕಾರಿದರು. `ಎದುರಿಗೆ ಸಿಕ್ಕಾಗ ಚನ್ನಾಗಿ ಮಾತನಾಡುವ ಎಂ ನಾರಾಯಣ ಅವರು ನಂತರ ಆಡಿದ ಮಾತು ಮರೆಯುತ್ತಾರೆ. ಹೀಗಾಗಿ ಶಿರೂರು ದುರಂತ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಬೇಕು' ಎಂದು ಆಗ್ರಹಿಸಿದರು.