
ಬಸ್ ನಿಲ್ದಾಣ: ಶೌಚಕ್ಕೆ ಹೋಗುವವರಿಗೆ ಬಿಸ್ಲರಿ ಬಾಟಲಿಯೇ ಗತಿ!
News Details
ಬಸ್ ನಿಲ್ದಾಣ: ಶೌಚಕ್ಕೆ ಹೋಗುವವರಿಗೆ ಬಿಸ್ಲರಿ ಬಾಟಲಿಯೇ ಗತಿ! ಮುಂಡಗೋಡ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಇಲ್ಲಿ ಶೌಚಾಲಯಕ್ಕೆ ತೆರಳುವವರಿಗೆ ಸಹ ಬಾಟಲಿ ನೀರು ಅನಿವಾರ್ಯವಾಗಿದೆ! ಕಳೆದ ಕೆಲ ದಿನಗಳಿಂದ ಮುಂಡಗೋಡು ಬಸ್ ನಿಲ್ದಾಣದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಇಲ್ಲಿನ ಕ್ಯಾಂಟಿನ್ ಗೋಡೆಗೆ ನೀರಿನ ಕೊರತೆಯಿಂದ ಕ್ಯಾಂಟಿನ್ ಬಂದ್ ಮಾಡಿರುವುದಾಗಿ ಬರೆಯಲಾಗಿದೆ. ಕೆಲ ದಿನಗಳ ಕಾಲ ಬಸ್ ನಿಲ್ದಾಣ ಬಳಿಯ ಶೌಚಾಲಯ ತೆರೆದಿದ್ದರೂ ಅಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಶೌಚಾಲಯಕ್ಕೆ ಸಹ ಇದೀಗ ಬಾಗಿಲು ಹಾಕಲಾಗಿದೆ. ಮುಂಡಗೋಡ ಬಸ್ ನಿಲ್ದಾಣಕ್ಕೆ ಹುಬ್ಬಳ್ಳಿ-ಶಿರಸಿ, ಯಲ್ಲಾಪುರ, ಕಲಘಟಗಿ, ಬಂಕಾಪುರ, ಶಿಗ್ಗಾಂವ್ ಸೇರಿ ಬೇರೆ ಬೇರೆ ಭಾಗದ ಬಸ್ಸುಗಳು ಬರುತ್ತವೆ. ಆ ಬಸ್ಸಿನ ಪ್ರಯಾಣಿಕರಿಗೆ ಇಲ್ಲಿ ನಿತ್ಯ ಸಮಸ್ಯೆಯಾಗುತ್ತಿದೆ. ಅದಾಗಿಯೂ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಹ ನಿಗಮ ಆಸಕ್ತಿವಹಿಸಿಲ್ಲ. ಹೀಗಾಗಿ ಅನಿವಾರ್ಯ ಕಾರಣದಿಂದ ಪ್ರಯಾಣಿಕರು ಬಸ್ ನಿಲ್ದಾಣದ ಆಜು-ಬಾಜು ಬಾಟಲಿ ಹಿಡಿದು ಅಲೆದಾಡುತ್ತಿದ್ದಾರೆ! ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಿರುವುದಾಗಿ ಸ್ಥಳೀಯ ಆಡಳಿತ ಹೇಳುತ್ತದೆ. ಆದರೆ, ಶೌಚಾಲಯ ವ್ಯವಸ್ಥೆಯನ್ನು ಸರಿಯಾಗಿರಿಸಿಲ್ಲ. ಶನಿವಾರ ಒಂದು ಟ್ಯಾಂಕರ್ ಮೂಲಕ ಶೌಚಾಲಯಕ್ಕೆ ನೀರು ಸರಬರಾಜು ಮಾಡಲಾಗಿದ್ದು, ಲಭ್ಯತೆಗೆ ಅನುಸಾರವಾಗಿ ನೀರು ಸಿಗದ ಕಾರಣ ಆ ಪರಿಸರ ಗಬ್ಬೆದ್ದಿದೆ. ಪರ ಊರಿನಿಂದ ಬರುವ ಮಹಿಳಾ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.