
ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಇಂದಿನಿಂದ ಶುರು: ಸಿಎಂ ಸಿದ್ದರಾಮಯ್ಯ ಮಾಹಿತಿ
News Details
ಜಾತಿ ಜನಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಈಗಾಗಲೇ ಜಾತಿ ಗಣತಿ ನಡೆಸಿರುವ ಕರ್ನಾಟಕ ಇದೀಗ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿ ಆರಂಭಿಸಿದೆ. ಒಳಮೀಸಲಾತಿ ಗಣತಿ ಇಂದಿನಿಂದ ಶುರುವಾಗುತ್ತಿದ್ದು, ಆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಜಾತಿ ಜನಗಣತಿ ವಿಚಾರ ದೇಶದಾದ್ಯಂತ ಚರ್ಚೆಯಲ್ಲಿದೆ. ಕರ್ನಾಟಕ ಜಾತಿ ಗಣತಿ (Caste Census) ಕೂಡ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ, ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿಯನ್ನು (Internal Reservation Caste Census) ಕರ್ನಾಟಕ ಸರ್ಕಾರ ಆರಂಭಿಸಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಆಯೋಗ ರಚಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿದ್ದೇವೆ ಎಂದು ಅವರು ತಿಳಿಸಿದರು.
ನಾಗಮೋಹನ್ ದಾಸ್ ಸಮಿತಿ ಇಂದಿನಿಂದ ಗಣತಿದಾರರು, ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದು, ಅವರು ಮನೆ ಮನೆಗೆ ತೆರಳಲಿದ್ದಾರೆ. ಒಳಮೀಸಲಾತಿ ಸಮೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ. ಇಂದಿನಿಂದ ಮೇ 17ರವರೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳು ಇವೆ. ಪರಿಶಿಷ್ಟ ಜಾತಿಗಳಲ್ಲಿ ಎಡ, ಬಲ, ಕೊರಚ, ಕೊರಮ, ಲಂಬಾಣಿಗಳು ಇದ್ದಾರೆ. ಒಳ ಮೀಸಲಾತಿ ಕೊಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬುದಾಗಿ ಎಡಗೈ ಹಾಗೂ ಬಲಗೈ ಸಮುದಾಯದವರು ಬರೆಸಿರುತ್ತಾರೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.