
ಶಿವಪುರ: ಪ್ರಕೃತಿಸೌಂದರ್ಯದಿಂದ ಶ್ರೀಮಂತ, ಅಭಿವೃದ್ಧಿಯಿಂದ ಹಿಂದುಳಿದ ಗ್ರಾಮ
News Details
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುಂದರ ಪರಿಸರದಿಂದ ಶ್ರೀಮಂತವಾಗಿರುವ ಜೊಯಿಡಾದ ಶಿವಪುರ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಹಿಂದುಳಿದಿದೆ. ಯಲ್ಲಾಪುರ-ಜೊಯಿಡಾ-ದಾಂಡೇಲಿ-ಉಳುವಿಯೊoದಿಗೆ ನಿಕಟ ಸಂಪರ್ಕದಲ್ಲಿರುವ ಈ ಊರು ಇನ್ನೂ ಆಧುನಿಕ ಪ್ರಪಂಚಕ್ಕೆ ತೆರೆದುಕೊಂಡಿಲ್ಲ.
ರಾಜ್ಯದಲ್ಲಿ ಅತಿ ವಿಸ್ತಾರವಾಗಿರುವ ಜೊಯಿಡಾ ತಾಲೂಕು ಹಿಂದುಳಿದ ಪ್ರದೇಶವಾಗಿದೆ. ಅದರಲ್ಲಿಯೂ ಶಿವಪುರ ಎಂಬ ಊರು ಮೂಲಭೂತ ಸೌಕರ್ಯಗಳಿಂದ ದೂರವುಳಿದಿದೆ. ರಸ್ತೆ, ಪಡಿತರ ವ್ಯವಸ್ಥೆ, ಸಾರಿಗೆ ಸಂಪರ್ಕಕ್ಕಾಗಿ ಈ ಊರಿನ ಜನ ಈಗಲೂ ಪರದಾಡುತ್ತಿದ್ದಾರೆ. ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಈ ಕ್ಷೇತ್ರಕ್ಕೆ ಬರುವ ಜನ ಸೌಕರ್ಯಗಳಿಲ್ಲದ ಊರು ನೋಡಿ ಮರುಕವ್ಯಕ್ತಪಡಿಸುತ್ತಿದ್ದಾರೆ.
ಉಳವಿಯಿಂದ 10 ಕಿಮೀ ದೂರದಲ್ಲಿ ಶಿವಪುರವಿದೆ. ಸುತ್ತಮುತ್ತಲು ಇನ್ನೂ ಐದಾರು ಗ್ರಾಮಗಳಿವೆ. ಯಲ್ಲಾಪುರದ ಸಾತೊಡ್ಡಿ ಜಲಪಾತ ಮಾರ್ಗವಾಗಿ ಊರಿಗೆ ತೆರಳಲು ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿನ ಅಡಿಕೆ ಬೆಳೆಗಾರರಿಗೆ ಯಲ್ಲಾಪುರ ಎಪಿಎಂಸಿ ದೊಡ್ಡ ಮಾರುಕಟ್ಟೆಯಾಗಿದ್ದು, ಭಾರೀ ಪ್ರಮಾಣದ ವಾಹನ ಸಂಚಾರಕ್ಕೆ ಊರಿನವರು ಸುತ್ತುವರೆದು ಬರುವುದು ಅನಿವಾರ್ಯ.
ಈ ಭಾಗದಲ್ಲಿ ಜನ ಸಂಖ್ಯೆ ಕಡಿಮೆಯಿದ್ದರೂ ಪ್ರವಾಸಿಗರ ಆಗಮನ ಎಂದಿಗೂ ಕಡಿಮೆ ಆಗುವುದಿಲ್ಲ. ಇಲ್ಲಿನ ಸುಂದರ ಬೆಟ್ಟ ಗುಡ್ಡಗಳ ಸಾಲು, ಜುಳು ಜುಳು ಹರಿವ ನೀರು, ಕಾಳಿ ಯ ಹಿನ್ನೀರಿಗೆ ಕಟ್ಟಿದ ತೂಗುಸೇತುವೆ, ಅಡಿಕೆ-ತೆಂಗು ನೋಡುವುದಕ್ಕಾಗಿ ಪ್ರವಾಸಿಗರು ಬರುತ್ತಾರೆ. ಉಳುವಿಗೆ ತೆರಳುವ ಭಕ್ತರು ಸಹ ಇದೇ ಊರಿನ ಮಾರ್ಗವಾಗಿ ಚಲಿಸುತ್ತಾರೆ. `ಕಡಿದಾದ ಬೆಟ್ಟಗುಡ್ಡಗಳ ನಡುವೆ, ಬ್ರಿಟಿಷರು ಖಡಿ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ನೀಡಿದ್ದರು. ಆದರೆ, ನಂತರ ಬಂದ ಯಾವ ಸರ್ಕಾರವೂ ಆ ರಸ್ತೆ ಅಭಿವೃದ್ಧಿಗೆ ಆಸಕ್ತಿವಹಿಸಿಲ್ಲ' ಎಂಬುದು ಊರಿನವರ ದೂರು.
`ಶಿವಪುರಕ್ಕೆ ಹಿಂದೆ ಕದ್ರಾ-ಕಾರವಾರದ ಸಂಪರ್ಕ ಇತ್ತು. ಆ ಬಳಿಕ ಕೊಡಸಳ್ಳಿ ಡ್ಯಾಮ್ ನಿರ್ಮಾಣದಿಂದ ಈ ಸಂಪರ್ಕ ಕಡಿತಗೊಂಡಿತು. ಹೀಗಾದಾಗ ಶಿವಪುರಕ್ಕೆ ಮೂಲ ಸೌಕರ್ಯವನ್ನು ವಿದ್ಯುತ್ ನಿಗಮ ನೀಡಬೇಕಾಗಿತ್ತು. ಆದರೆ ನೀಡಿಲ್ಲ' ಎಂದು ಅಲ್ಲಿನವರು ಅಳಲುತೋಡಿಕೊಂಡರು. `ಅಡಿಕೆ ಬಾಳೆ ತೆಂಗು, ಕಾಳು ಮೆಣಸುಗಳನ್ನು ಸಮೃದ್ಧವಾಗಿ ಬೆಳೆಯುವ ಇಲ್ಲಿನ ರೈತರಿಗೆ ಕಾಳಿ ನದಿ ದಾಟಿದರೆ ಯಲ್ಲಾಪುರ ಕೇವಲ 15 ಕಿಮೀ ದೂರ. ಆದರೆ, ಅಲ್ಲಿ ಫಸಲು ಸಾಗಿಸಬೇಕು ಎಂದರೆ 150 ಕಿಮೀ ಸಂಚರಿಸುವುದು ಅನಿವಾರ್ಯ. ಆ ಭಾಗದ ರಸ್ತೆ ಸಹ ಸರಿಯಾಗಿಲ್ಲ' ಎಂದು ಅಲ್ಲಿನ ಜನ ತಮ್ಮ ಕಷ್ಟ ವಿವರಿಸಿದರು.
ಈ ಊರಿನವರ ಬಳಿ ಪಡಿತರ ಚೀಟಿ ಇದೆ. ಆದರೆ, ಸರ್ಕಾರ ನೀಡುವ ಪಡಿತರ ಸಾಮಗ್ರಿ ತರಬೇಕು ಎಂದರೂ ಬಹುದೂರ ಸಾಗಬೇಕು. ಕನಿಷ್ಟ ಸೌಕರ್ಯಗಳನ್ನು ಒದಗಿಸಿದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂಬುದು ಊರಿನವರ ಅಭಿಪ್ರಾಯ.