
ಭಾರತ-ಪಾಕಿಸ್ತಾನ ಸಂಘರ್ಷ ಭೀತಿಯಿಂದ, ಕಾರವಾರದಲ್ಲಿ ಮೇ 7ರಿಂದ ಸಮರಾಭ್ಯಾಸ
News Details
ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆ ಹಿನ್ನಲೆ ರಾಜ್ಯದ ಮೂರು ಕಡೆ ಸಮರಾಭ್ಯಾಸ ನಡೆಸುವ ಸಿದ್ಧತೆ ನಡೆದಿದೆ. ಅದರ ಪ್ರಕಾರ ಕಾರವಾರದಲ್ಲಿ ಸಹ ಮೇ 7ರಿಂದ ಈ ಸಮರಾಭ್ಯಾಸ ನಡೆಯಲಿದೆ.
ಈ ಅಣಕು ಕಾರ್ಯಾಚರಣೆಯಲ್ಲಿ ಯುದ್ಧ ನಡೆದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮದ ಬಗ್ಗೆ ಜನರಲ್ಲಿಯೂ ಅರಿವು ಮೂಡಿಸಲಾಗುತ್ತದೆ. ಇದಕ್ಕೆ `ಆಪರೇಶನ್ ಅಭ್ಯಾಸ್' ಎಂದು ಹೆಸರಿಡಲಾಗಿದೆ. ಕದಂಬ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಘಟಕ ವ್ಯಾಪ್ತಿಯಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ.
ಯುದ್ಧದ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಗೃಹರಕ್ಷಕ ದಳ, ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಪೊಲೀಸ್, ನೇವಿ ಸೇರಿದಂತೆ ಸಿವಿಲ್ ಸಿಬ್ಬಂದಿ ಸಹ ಕಾರ್ಯಾಚರಣೆಯ ರೂವಾರಿಗಳಾಗಿದ್ದಾರೆ.
ಬುಧವಾರ ಬೆಳಗ್ಗೆ ನಾಲ್ಕು ಗಂಟೆಗೆ ಅಣಕು ಕಾರ್ಯಾಚರಣೆಯ ಮಾಕ್ ಡ್ರಿಲ್ ಆರಂಭವಾಗಲಿದೆ. ಜನರಿಗೆ ಭಾರತೀಯ ನೌಕಾಪಡೆ, ಆರ್ಮಿ ಜೊತೆ ಸಂಪರ್ಕ ಸಾಧಿಸಲು ತರಬೇತಿ ನೀಡಲಾಗುತ್ತದೆ. ಅಗ್ನಿಶಾಮಕ ಕಾರ್ಯಾಚರಣೆ, ಅಪಾಯದಿಂದ ರಕ್ಷಣೆಯ ಉಪಾಯಗಳನ್ನು ಕಲಿಸಲಾಗುತ್ತದೆ.
ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಮಂಗಳವಾರ ಸಂಜೆ ಮಾಹಿತಿ ನೀಡಿದರು. `ಯುದ್ಧದ ವಾತಾವರಣದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ತೊಂದರೆಗೆ ಸಿಲುಕಿದವರನ್ನು ರಕ್ಷಣೆ ಮಾಡುವ ಉದ್ದೇಶ ಅಣಕು ಕಾರ್ಯಾಚರಣೆಯದ್ದಾಗಿದೆ' ಎಂದವರು ತಿಳಿಸಿದರು.