
ವಿ ಎಸ್ ಭಟ್ಟ ಮತ್ತೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ
News Details
ಈ ಹಿಂದೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅನುಭವ ಹೊಂದಿರುವ ವಿ ಎಸ್ ಭಟ್ಟ ಅವರನ್ನು ಮತ್ತೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ವಿ ಎಸ್ ಭಟ್ಟ ಅವರು ಶಾಸಕ ಶಿವರಾಮ ಹೆಬ್ಬಾರ್ ಗರಡಿಯಲ್ಲಿ ಪಳಗಿದವರು. ಹಳಿಯಾಳ ವಿಧಾನಸಭಾ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ, ಮಾಜಿ ಶಾಸಕ ವಿ ಎಸ್ ಪಾಟೀಲ್ ಸೇರಿ ಕಾಂಗ್ರೆಸ್ಸಿನ ಘಟನಾನುಘಟಿಗಳ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಯಲ್ಲಾಪುರ ಕಾಂಗ್ರೆಸ್ಸಿನಲ್ಲಿ ಆಗಾಗ ಸಣ್ಣಪುಟ್ಟ ಬಿರುಕು-ಬಿನ್ನಾಭಿಪ್ರಾಯಗಳು ಮೂಡಿ ಬರುತ್ತಿದ್ದು, ಅದೆಲ್ಲವನ್ನು ಸರಿಪಡಿಸಿಕೊಂಡು ಹೋಗುವ ಮಹತ್ವದ ಹೊಣೆಗಾರಿಕೆಯನ್ನು ವಿ ಎಸ್ ಭಟ್ಟ ಅವರಿಗೆ ವಹಿಸಲಾಗಿದೆ.
ಇನ್ನೂ ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಭಾರೀ ಪ್ರಮಾಣದ ಪೈಪೋಟಿಯಿದೆ. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವಷ್ಟರ ಮಟ್ಟಿಗೆ ಈ ಹುದ್ದೆ ಗಟ್ಟಿಯಾಗಿದ್ದು, ವಿ ಎಸ್ ಭಟ್ಟ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಕಾಂಗ್ರೆಸ್ ಸಂಘಟನೆಗೆ ಶಕ್ತಿ ಸಿಕ್ಕಿದೆ.
2008ರಿಂದ ರಾಜಕೀಯದಲ್ಲಿರುವ ವಿ ಎಸ್ ಭಟ್ಟ ಅವರು ಪಕ್ಷ ಸಂಘಟನೆಗಾಗಿ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವನ್ನು ಅವರು ಹೊಂದಿದ್ದಾರೆ. ಯುವಕರಿಗೆ ಅಧಿಕಾರ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದು, ಅದರ ಪ್ರಕಾರ ವಿ ಎಸ್ ಭಟ್ಟ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಇದರೊಂದಿಗೆ ಅವರ ಜವಾಬ್ದಾರಿ ಸಹ ಹೆಚ್ಚಾಗಿದೆ.