
ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಕಾರವಾರ ಬಂದ್ ಯಶಸ್ವಿ
News Details
ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಹಿಂದು ಸಂಘಟನೆಯವರು ಕರೆ ನೀಡಿದ್ದ ಕಾರವಾರ ಬಂದ್ ಯಶಸ್ವಿಯಾಗಿದೆ. ಸರ್ಕಾರಿ ಕಚೇರಿ, ಬ್ಯಾಂಕ್ ಹಾಗೂ ಔಷಧಿ ಮಳಿಗೆಹೊರತುಪಡಿಸಿ ಬುಧವಾರ ಕಾರವಾರ ಸಂಪೂರ್ಣವಾಗಿ ಸ್ಥಬ್ದವಾಗಿತ್ತು. ವಿವಿಧ ಅಂಗಡಿ ಮುಂಗಟ್ಟಿನವರು ಸ್ವಯಂ ಪ್ರೇರಣೆಯಿಂದ ಮಳಿಗೆಗೆ ಬೀಗ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಕಾಣಿಸಿತು.
ಇಲ್ಲಿನ ಮೀನು ಮಾರುಕಟ್ಟೆಯವರು ಸ್ವಯಂ ಪ್ರೇರಿತವಾಗಿ ಬಂದ್'ಗೆ ಬೆಂಬಲ ನೀಡಿದರು. ಖಾಸಗಿ ವಾಹನ, ರಿಕ್ಷಾ ಸಂಚಾರ ಭಾಗಶಃ ಬಂದ್ ಆಗಿದ್ದವು. ಹಿಂದು ಸಂಘಟನೆಗಳ ಸಮಾನ ಮನಸ್ಕರ ವೇದಿಕೆಯವರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೋಡಿಬೀರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವೃದ್ಧರು - ಮಹಿಳೆಯರು ಭಾಗವಹಿಸಿ ಗಮನಸೆಳೆದರು. ನೂರಾರು ಹಿಂದು ಕಾರ್ಯಕರ್ತರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶಹೊರಹಾಕಿದರು.
ಈ ಹಿಂದೆ ಹತ್ಯೆಯಾಗಿದ್ದ ಪ್ರಶಾಂತ ಪೂಜಾರಿ, ಹರ್ಷ ಹಿಂದೂ, ಶುವು ಉಪ್ಪಾರ, ಕನ್ನಯ್ಯಲಾಲ್, ರುದ್ರೇಶ್ ಅವರ ಭಾವಚಿತ್ರಗಳು ಮೆರವಣಿಗೆಯಲ್ಲಿ ಕಾಣಿಸಿದವು. `ಹಿಂದೂಸ್ಥಾನ್ ಜಿಂದಾಬಾದ್' ಎನ್ನುವ ಘೋಷಣೆ ಹಾಕಿದರು. ಸುಭಾಷ್ ವೃತ್ತ, ಹೂವಿನ ಚೌಕ, ಕಾಜುಬಾಗ ವೃತ್ತ, ಪಿಕಳೆ ರಸ್ತೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು.
ಹಿಂದು ಸಂಘಟನೆಗಳ ಸಮಾನ ಮನಸ್ಕ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ `ಸುಹಾಸ್ ಶೆಟ್ಟಿ ಹತ್ಯೆ ನಡೆದರೂ ರಾಜ್ಯದ ನಾಯಕರು ಅವರ ಮನೆಗೆ ಭೇಟಿ ನೀಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸುಹಾಸ್ ಹತ್ಯೆಗೆ ತಿಂಗಳ ಮೊದಲೇ ಜಿಹಾದಿಗಳು ಬೆದರಿಕೆ ಹಾಕಿದ್ದರು. ಆದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಿಂದುಗಳು ಒಗ್ಗಟ್ಟಾಗುವವರೆಗೆ ದಬ್ಬಾಳಿಕೆ ಮುಂದುವರೆಯುತ್ತದೆ. ಒಗ್ಗಟ್ಟಾಗಿದ್ದರೆ ಯಾರೂ ನಮ್ಮನ್ನು ಎದುರಿಸಲು ಸಾಧ್ಯವಿಲ್ಲ' ಎಂದು ಹೇಳಿದರು.
ಸನಾತನ ಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಗಜೇಂದ್ರ ನಾಯ್ಕ `ಹಿಂದು ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡನೀಯ. ಸನಾತನ ಧರ್ಮ ಹತ್ತಿಕ್ಕುವ ಪ್ರಯತ್ನ ನಡದಿದೆ' ಎಂದು ದೂರಿದರು. ಈ ಪ್ರತಿಭಟನೆಯಲ್ಲಿ ಬಿ ಎಸ್ ಪೈ, ಮಹೇಶ ಹರಿಕಂತ್ರ, ಸುಶೀಲಾ ಹರಿಕಂತ್ರ, ಶರದ್ ಬಾಂದೇಕರ್ ಇತರರು ಇದ್ದರು.