
ಅಡಿಕೆ ಬೆಳೆಗಾರರಿಗೆ ಕ್ಷೇಮಾ ಇನ್ಸುರೆನ್ಸಿ ವಿರುದ್ಧ ಗೆಲುವು
News Details
ಕಳೆದ ಐದು ತಿಂಗಳಿನಿoದ ನಡೆಯುತ್ತಿದ್ದ ಅಡಿಕೆ ಬೆಳೆಗಾರರು ಹಾಗೂ ಕ್ಷೇಮಾ ಇನ್ಸುರೆನ್ಸ ಕಂಪನಿ ನಡುವಿನ ತಿಕ್ಕಾಟ ಕೊನೆಯಾಗಿದ್ದು, ಅಡಿಕೆ ಬೆಳೆಗಾರರಿಗೆ ಗೆಲುವು ಸಿಕ್ಕಿದೆ. ಎರಡು ದಿನಗಳಿಂದ ರೈತರ ಖಾತೆಗೆ ಅಡಿಕೆ ಬೆಳೆ ವಿಮೆಯ ಪರಿಹಾರ ಜಮಾ ಆಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ರೈತರು ಬೆಳೆ ಸಾಲ ಪಡೆಯುವ ಅವಧಿಯಲ್ಲಿ ಬೆಳೆ ರಕ್ಷಣೆಗಾಗಿ ವಿಮೆ ಪಡೆದಿದ್ದರು. ಪ್ರತಿಯೊಬ್ಬರು ಪ್ರಾಮಾಣಿಕವಾಗಿ ವಿಮಾ ಕಂತನ್ನು ಪಾವತಿಸಿದ್ದರು. ಕಳೆದ ವರ್ಷ ಸಾಕಷ್ಟು ಪ್ರಮಾಣದಲ್ಲಿ ಹವಾಮಾನ ವೈಪರಿತ್ಯ ನಡೆದಿದ್ದರೂ ವಿಮಾ ಕಂಪನಿ ಮಾತ್ರ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿತ್ತು. `ಹವಾಮಾನ ಅಳೆಯುವ ಯಂತ್ರ ಸರಿಯಿಲ್ಲದ ಕಾರಣ ಪರಿಹಾರ ನೀಡಲು ಸಾಧ್ಯವಿಲ್ಲ' ಎಂದು ಕಂಪನಿ ವಾದಿಸಿತ್ತು.
`ಹವಾಮಾನ ಅಳೆಯುವ ಯಂತ್ರ ನಿರ್ವಹಣೆ ರಾಜ್ಯ ಸರ್ಕಾರದ ಹೊಣೆ' ಎಂದು ಬಿಜೆಪಿಗರು ದೂರಿದ್ದರು. `ಬೆಳೆ ವಿಮೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ' ಎಂದು ಕಾಂಗ್ರೆಸಿಗರು ಆರೋಪಿಸಿದ್ದರು. ರೈತರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರ ವಿಷಯದಲ್ಲಿ ರಾಜಕೀಯ ಪ್ರವೇಶವಾಗಿದ್ದು, ಅಡಿಕೆ ಬೆಳೆಗಾರರು ಮಾತ್ರ ಇದರಿಂದ ಅನ್ಯಾಯಕ್ಕೆ ಒಳಗಾಗಿದ್ದರು. ಜೊತೆಗೆ ಜನ ಕಂಪನಿ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದರು.
ಅನೇಕ ಆರೋಪ-ಪ್ರತ್ಯಾರೋಪ, ಹೋರಾಟ, ಬೆದರಿಕೆ, ಕೇಂದ್ರ ಸರ್ಕಾರದ ಸೂಚನೆ ನಂತರವೂ ಕ್ಷೇಮಾ ಇನ್ಸುರೆನ್ಸ ಕಂಪನಿ ರೈತರ ಹಣ ಪಾವತಿಗೆ ಒಪ್ಪಿರಲಿಲ್ಲ. ಕೇಂದ್ರ ಸರ್ಕಾರವೇ ಮೂರು ಬಾರಿ ನೋಟಿಸ್ ನೀಡಿದರೂ ರೈತರ ಹಣ ಪಾವತಿಸಿರಲಿಲ್ಲ. ಯಲ್ಲಾಪುರ ಶಾಸಕರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರು ವಿಮಾ ಕಂಪನಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದರು. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ವಿಮಾ ಕಂಪನಿ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದರು. ರೈತರು ಸಹ ಸಾಕಷ್ಟು ಪ್ರಮಾಣದಲ್ಲಿ ಹೋರಾಟ ನಡೆಸಿದ್ದು, ಈ ಬಾರಿ ವಿಮಾ ಕಂತು ಪಾವತಿಗೂ ಹಿಂದೇಟು ಹಾಕಿದ್ದರು.
ಈ ಎಲ್ಲಾ ಹಿನ್ನಲೆ ಇದೀಗ ಕ್ಷೇಮಾ ಇನ್ಸುರೆನ್ಸ ಕಂಪನಿ ಅನ್ಯಾಯಕ್ಕೊಳಗಾದ ರೈತರಿಗೆ ಹಣ ಪಾವತಿಸಿದೆ. ಪ್ರತಿ ಗುಂಟೆಗೆ 450ರೂ ಆಸುಪಾಸಿನಲ್ಲಿ ಹಣ ಜಮಾ ಆಗುತ್ತಿದೆ. ಬೆಳೆ ಸಾಲದ ಮರುಪಾವತಿ ನಡೆದು, ಹೊಸ ಸಾಲ ಸಿಗುವ ಮುನ್ನ ವಿಮಾ ಕಂತು ಜಮಾ ಆಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.