
ಯುದ್ಧ ಭೀತಿ: ರಜೆ ಮುಗಿಸಿ ಕರ್ತವ್ಯಕ್ಕೆ ಮರಳಿದ ಉತ್ತರ ಕನ್ನಡದ ಸೈನಿಕರು
News Details
ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತ ದಾಳಿ ನಡೆಸಿದ್ದು, ಯುದ್ಧ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆ ರಜೆ ಮೇಲೆ ಊರಿಗೆ ಬಂದಿದ್ದ ಸೈನಿಕರನ್ನು ಸರ್ಕಾರ ಕರ್ತವ್ಯಕ್ಕೆ ಕರೆದಿದೆ. ರಜೆಯನ್ನು ಮೊಟಕುಗಳಿಸಿದ ಉತ್ತರ ಕನ್ನಡ ಜಿಲ್ಲೆಯ ಸೈನಿಕರು ಶತ್ರುಗಳ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅನೇಕ ಸೈನಿಕರಿದ್ದಾರೆ. ಅವರಲ್ಲಿ ಕೆಲವರು ರಜೆ ಮೇಲೆ ಊರಿಗೆ ಬಂದಿದ್ದರು. ಸರ್ಕಾರದ ಸೂಚನೆ ಮೇರೆಗೆ ಅವರು ದಿಢೀರ್ ಆಗಿ ಕೆಲಸಕ್ಕೆ ತೆರಳಿದ್ದಾರೆ. ಕುಟುಂಬದವರ ಜೊತೆ ಕಾಲ ಕಳೆಯಬೇಕಿದ್ದ ಸೈನಿಕರು ದೇಶ ಸೇವೆಗಾಗಿ ತಮ್ಮ ಕೇಂದ್ರ ಸ್ಥಾನಕ್ಕೆ ತೆರಳಿದ್ದಾರೆ.
ಹಳಿಯಾಳದ ವಿನಯ ನಾವಲಗಿ, ಸಾಗರ ನಾವಲಗಿ, ಮಹೇಶ ಘೋಟ್ನೇಕರ್ ಬುಧವಾರವೇ ರಜೆ ಮುಗಿಸಿ ಸೈನ್ಯ ಸೇರಿದ್ದಾರೆ. ಮಾರುತಿ ಕುಟ್ರೆ ಅವರು ಗುರುವಾರ ಕೇಂದ್ರ ಸ್ಥಾನಕ್ಕೆ ಹೊರಟಿದ್ದಾರೆ. ಜಿಲ್ಲೆಯ ವಿವಿಧ ಭಾಗದಲ್ಲಿರುವ ಎಲ್ಲಾ ಸೈನಿಕರಿಗೂ ಶುಕ್ರವಾರದ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿದ್ದು, ಇದಕ್ಕಾಗಿ ಅನೇಕರು ಊರಿನಿಂದ ಹೊರಟಿದ್ದಾರೆ.
`ವಿಜಯಶಾಲಿಯಾಗಿ ಬನ್ನಿ' ಎಂಬ ಘೋಷಣೆಗಳೊಂದಿಗೆ ಊರಿನ ಜನ ಸೈನಿಕರನ್ನು ಬೀಳ್ಕೊಡುತ್ತಿದ್ದಾರೆ. ಹಳಿಯಾಳದ ಮಾಜಿ ಸೈನಿಕರಾದ ವಿಠ್ಠಲ ಜೂಜವಾಡಕರ್, ವಿಜಯಕುಮಾರ ಪಾಟೀಲ, ಸುರೇಶ ಪಟ್ಟೇಕರ್, ಶ್ರೀಧರ ಬನೋಶಿ, ಮುಕುಂದ ನಾವಲಗಿ, ಚಂದ್ರಶೇಖರ ಕಂಬಾರ್, ಸುರೇಶ ಗೌಡ ಇತರರು ದೇಶ ಸೇವೆಗೆ ಹೊರಟವರನ್ನು ಸನ್ಮಾನಿಸಿದರು.