
ದೌರ್ಜನ್ಯ ನಿಯಂತ್ರಣ ಸಮಿತಿಗೆ ಯಲ್ಲಾಪುರದ ಸುರೇಶ್ ಸಿದ್ದಿ ಜಿಲ್ಲಾ ಸದಸ್ಯರಾಗಿ ಆಯ್ಕೆ
News Details
ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ರಚಿಸಲಾದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಯಲ್ಲಾಪುರದ ಸುರೇಶ ಸಿದ್ದಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಈ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸಮಿತಿಯ ಸದಸ್ಯರಾಗಿದ್ದಾರೆ. ಸರ್ಕಾರಿ ಅಭಿಯೋಜಕರು, ಕೃಷಿ ನಿರ್ದೇಶಕರು, ಪ್ರಾಧ್ಯಾಪಕರು ಸೇರಿ ವಿವಿಧ ಕ್ಷೇತ್ರದ ಗಣ್ಯರನ್ನು ಈ ಸಮಿತಿ ಸದಸ್ಯರನ್ನಾಗಿಸಿಕೊಂಡಿದೆ. ಅವರ ಜೊತೆ ಸುರೇಶ ಸಿದ್ದಿ ಸಹ ಸದಸ್ಯರಾಗಿದ್ದು, ಗುರುವಾರ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಿತಿಯ ಮೊದಲ ಸಭೆ ಎದುರಿಸಿದರು.
ಸುರೇಶ ಸಿದ್ದಿ ಅವರು ಯಲ್ಲಾಪುರದ ನಂದೂಳ್ಳಿಯ ಸೂಳಗಾರಿನವರು. ಹಿಂದುಳಿದ ಬುಡಕಟ್ಟು ಸಮುದಾಯದ ಅವರು ಗ್ರಾಮೀಣ ಭಾಗದಲ್ಲಿ ಗ್ರಾಮ ಒನ್ ಕೇಂದ್ರದ ಮೂಲಕ ಸ್ವ ಉದ್ಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ 10 ವರ್ಷಗಳ ಕಾಲ ಕಿರವತ್ತಿ ತಪಾಸಣಾ ಕೇಂದ್ರದಲ್ಲಿ ಅವರು ಸೇವೆ ಸಲ್ಲಿಸಿದ್ದರು. ಲಾಂಪ್ಸ ಸೊಸೈಟಿಯಲ್ಲಿ ಸಹ ಅವರ ಕರ್ತವ್ಯ ನಿಭಾಯಿಸಿದ್ದರು. ಸದ್ಯ ಗ್ರಾಮ ಒನ್ ಕೇಂದ್ರದ ಮೂಲಕ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ಸರ್ಕಾರ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಆಯ್ಕೆ ಮಾಡಿದೆ.