
*ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಅಕ್ರಮ ಬಯಲು!*
News Details
*ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಅಕ್ರಮ ಬಯಲು!* ವೈದ್ಯಕೀಯ ಸೇವೆ ಪಡೆಯಲು ತುರ್ತು ಸನ್ನಿವೇಶಕ್ಕೆ ಸಿಲುಕಿರುವ ಜನರನ್ನು ಸಹ ಬಿಡದೇ ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಪಡಿತರ ಚೀಟಿ ವಿತರಣಾ ಕೇಂದ್ರದಲ್ಲಿ ನಿತ್ಯ ಅನಧಿಕೃತವಾಗಿ ಸಾವಿರಾರು ರೂ ಸಂಗ್ರಹವಾಗುತ್ತಿದೆ. ಸರ್ಕಾರಿ ಯೋಜನೆಗಳ ಪ್ರಯೋಜನಪಡೆಯುವುದಕ್ಕಾಗಿ ಅನೇಕರು ರೇಶನ್ ಕಾರ್ಡ ಪಡೆಯಲು ಮುಗಿ ಬೀಳುತ್ತಾರೆ. ಆದರೆ, ಇದನ್ನು ಬಂಡವಾಳ ಮಾಡಿಕೊಂಡ ಸಕಾರಿ ಸೇವೆ ನೀಡಬೇಕಾದ ಸಿಬ್ಬಂದಿ ದುಡ್ಡು ಮಾಡುತ್ತಿದ್ದಾರೆ. ಬಿಳಿ ಹಾಳೆ ಮೇಲೆ ರೇಶನ್ ಕಾರ್ಡ ಮುದ್ರಿಸಿ ಕೊಡುವುದಕ್ಕಾಗಿ ಕಾರವಾರ ಆಹಾರ ಇಲಾಖೆಯಲ್ಲಿ ಮುಗ್ದ ಜನರಿಂದ ಹಣ ವಸೂಲಿ ನಡೆದಿದೆ ರೇಶನ್ ಕಾರ್ಡಿಗಾಗಿ ಅರ್ಜಿ ಹಾಗೂ ತಿದ್ದುಪಡಿಗೆ ಜನ ಕರ್ನಾಟಕ ಒನ್ ಮೂಲಕ ಮನವಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಸುವ ವೇಳೆಯಲ್ಲಿಯೇ ಜನ ಅಧಿಕೃತವಾಗಿ 25ರೂ ಪಾವತಿಸಿ ರಸೀದಿ ಪಡೆಯುತ್ತಾರೆ. ಎಲ್ಲಾ ದಾಖಲೆ ಪರಿಶೀಲನೆ ನಂತರ ತಹಶೀಲ್ದಾರ್ ಕಚೇರಿಯಲ್ಲಿ ರೇಶನ್ ಕಾರ್ಡ ನೀಡಲಾಗುತ್ತದೆ. ಈ ಕಾರ್ಡ ವಿತರಣೆ ವೇಳೆ ಸರ್ಕಾರಿ ಕಚೇರಿ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ. ಹಣ ಪಡೆಯುವ ಸಿಬ್ಬಂದಿ ಅಂಚಿನಲ್ಲಿಯೇ ಆಹಾರ ನಿರೀಕ್ಷಕರು ಕುಳಿತಿದ್ದರೂ ಇದಕ್ಕೆ ತಕರಾರು ಸಲ್ಲಿಸಿಲ್ಲ. ವರ್ಷದ ಬಹುಪಾಲು ದಿನ ರೇಶನ್ ಕಾರ್ಡ ತಿದ್ದುಪಡಿ ಹಾಗೂ ಹೊಸ ಅರ್ಜಿಯ ವೆಬ್‌ಸೈಟ್ ಸೇವೆ ಒದಗಿಸುವುದಿಲ್ಲ. ಆಗಾಗ ಮಾತ್ರ ತಿದ್ದುಪಡಿ ಹಾಗೂ ಹೊಸ ಅರ್ಜಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗುತ್ತದೆ. ತುರ್ತು ವೈದ್ಯಕೀಯ ಸೌಲಭ್ಯ, ವಿವಾಹದ ನಂತರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ಆಧಾರ್ ಲಿಂಕ್ ಸೇರಿ ವಿವಿಧ ಕಾರಣಗಳಿಂದ ಜನ ಪಡಿತರ ಚೀಟಿ ಪಡೆಯುತ್ತಿದ್ದಾರೆ. ಅದರಲ್ಲಿಯೂ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ದಾಖಲಾಗಿರುವಾಗ ಅವರ ಚಿಕಿತ್ಸೆಯ ನೆರವಾಗಾಗಿ ರೇಶನ್ ಕಾರ್ಡ ಅನಿವಾರ್ಯ. ಸಾಕಷ್ಟು ಅಲೆದಾಟ ನಡೆಸಿ ಸುಸ್ತಾದ ಜನ `ರೇಶನ್ ಕಾರ್ಡ ಸಿಕ್ಕರೆ ಸಾಕು' ಎಂದು 100ರೂ ನೀಡಿ ಬರುತ್ತಿದ್ದಾರೆ. ಫೋನ್ ಫೇ ಮೂಲಕವೂ ಅಲ್ಲಿನ ಸಿಬ್ಬಂದಿ ತಮ್ಮ ಖಾಸಗಿ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ . ಕಾರವಾರದ ಕಾಂಗ್ರೆಸ್ ಯುವ ಮುಖಂಡ ಅಶ್ರಫ್ ಅವರು ಹಣ ಕೊಡುವಾಗ ಇನ್ನೊಬ್ಬರು ಅದನ್ನು ವಿಡಿಯೋ ಮಾಡಿದ್ದಾರೆ. `ಅನಿವಾರ್ಯವಾಗಿ ಆ ದಿನ ಹಣ ನೀಡಲಾಯಿತು. ಕಾನೂನುಬಾಹಿರವಾಗಿ ಹಣ ಪಡೆದಿರುವುದು ಸರಿಯಲ್ಲ' ಎಂದು ಅಶ್ರಫ್ ಹೇಳಿದ್ದಾರೆ.