
ಅನೇಕ ವರ್ಷಗಳ ಬಳಿಕ ಬಂಧನ – ಯಲ್ಲಾಪುರದ ರಾಮಚಂದ್ರ ನಾಯ್ಕರು ಮುರುಡೇಶ್ವರ ಪೊಲೀಸ್ ವಶಕ್ಕೆ
News Details
ಅನೇಕ ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ ಯಲ್ಲಾಪುರದ ರಾಮಚಂದ್ರ ನಾಯ್ಕರನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.
2023ರಲ್ಲಿ ಮುರುಡೇಶ್ವರದಲ್ಲಿ ನಡೆದ ದೌರ್ಜನ್ಯಕ್ಕೆ ಸಂಬAಧಿಸಿದ ಅಪರಾಧ ಪ್ರಕರಣದಲ್ಲಿ ರಾಮಚಂದ್ರ ನಾಯ್ಕ ಆರೋಪಿಯಾಗಿದ್ದರು. ಪತ್ನಿ ಪೀಡಿಸಿದ ಆರೋಪ ಅವರ ಮೇಲಿದ್ದು ನ್ಯಾಯಾಲಯದಿಂದ ತಪ್ಪಿಸಿಕೊಂಡು ಓಡಾಡಿಕೊಂಡಿದ್ದರು. ಎಷ್ಟು ಹುಡುಕಿದರೂ ಪೊಲೀಸರಿಗೆ ಮಾತ್ರ ರಾಮಚಂದ್ರ ನಾಯ್ಕ ಸಿಕ್ಕಿ ಬಿದ್ದಿರಲಿಲ್ಲ. ಹೀಗಾಗಿ ರಾಮಚಂದ್ರ ನಾಯ್ಕರ ಹುಡುಕಾಟಕ್ಕೆ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಮುರುಡೇಶ್ವರ ಪೊಲೀಸರು ಹೈದರಬಾದ್, ಬೆಂಗಳೂರು ಮೊದಲಾದ ಕಡೆ ಹುಡುಕಾಟ ನಡೆಸಿದ್ದರು. ಆದರೆ, ಕೊನೆಕ್ಷಣದಲ್ಲಿ ರಾಮಚಂದ್ರ ನಾಯ್ಕ ತಪ್ಪಿಸಿಕೊಳ್ಳುತ್ತಿದ್ದರು. ಪೊಲೀಸರ ಆಗಮನಕ್ಕೂ ಮುನ್ನವೇ ರಾಮಚಂದ್ರ ನಾಯ್ಕ ಪರಾರಿಯಾಗುವುದನ್ನು ರೂಢಿಸಿಕೊಂಡಿದ್ದರು.
ಶನಿವಾರ ವಿಜಯಪುರದಲ್ಲಿ ರಾಮಚಂದ್ರ ನಾಯ್ಕ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ರಾಮಚಂದ್ರ ನಾಯ್ಕರನ್ನು ಹಿಡಿಯಲು ಉಪಾಯ ಮಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಅವರ ಜೊತೆ ಚರ್ಚಿಸಿ ವಿಜಯಪುರಕ್ಕೆ ಪೊಲೀಸ್ ತಂಡ ಕಳುಹಿಸಿಕೊಟ್ಟರು.
ಭಟ್ಕಳ ಡಿವೈಎಸ್‌ಪಿ ಮಹೇಶ್ ಎಂ ಅವರ ನಿರ್ದೇಶನದಂತೆ ಸಿಪಿಐ ಸಂತೋಷ ಕಾಯ್ಕಿಣಿ ನಡೆದುಕೊಂಡರು. ಪಿಎಸ್‌ಐ ಹಣಮಂತ ಬೀರಾದರ್, ಸಿಬ್ಬಂದಿ ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ ವಿಶೇಷ ಕಾರ್ಯಾಚರಣೆ ನಡೆಸಿ ರಾಮಚಂದ್ರ ನಾಯ್ಕರನ್ನು ಹಿಡಿದರು. ವಿಜಯಪುರದ ವಿವೇಕನಗರದಲ್ಲಿ ಅವಿತಿದ್ದ ರಾಮಚಂದ್ರ ನಾಯ್ಕ ಇದೀಗ ನ್ಯಾಯಾಲಯದ ವಶದಲ್ಲಿದ್ದಾರೆ.