
ಭಟ್ಕಳಕ್ಕೆ ಕೇರಳದಿಂದ ಅಕ್ರಮ ಹಸು ಸಾಗಣೆ!
News Details
ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಕೇರಳದಿಂದ ಅಕ್ರಮ ಜಾನುವಾರು ಸಾಗಿಸಲಾಗುತ್ತಿದೆ. ಗೋವಧೆ ಉದ್ದೇಶದಿಂದ ಹಸುಗಳನ್ನು ಹಿಂಸಾತ್ಮಕವಾಗಿ ಭಟ್ಕಳಕ್ಕೆ ತರಲಾಗುತ್ತಿದೆ.
ಕೇರಳದಿಂದ ಭಟ್ಕಳಕ್ಕೆ ಬರುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವುಗಳನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಅಕ್ರಮ ಜಾನುವಾರು ಸಾಗಾಟ ಜಾಲದಲ್ಲಿ ಸಕ್ರಿಯವಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಅಂದಾಜು 10 ಲಕ್ಷ ರೂ ಮೌಲ್ಯದ ಜಾನುವಾರು ಸಾಗಾಟ ನಡೆದಿದ್ದು, ಪೊಲೀಸರು ಹಿಂಸೆ ಅನುಭವಿಸುತ್ತಿದ್ದ ಗೋವುಗಳ ಜೀವ ಕಾಪಾಡಿದ್ದಾರೆ.
ಹಾಸನ ಹೊಳೆನರಸಿಂಹಪುರದ ದೊಡ್ಡಮಸಿದಿ ಬಳಿಯ ಇಲಿಯಾಜ ಪಾಷಾ ವಾಹನವೊಂದರಲ್ಲಿ ಜಾನುವಾರುಗಳನ್ನು ತುಂಬಿಸಿ ತರುತ್ತಿದ್ದರು. ಸಯ್ಯದ್ ಹುಸೇನ್ ಹಾಗೂ ಮತ್ತೊಬ್ಬರ ಅವರ ಜೊತೆಯಿದ್ದರು. 4 ಕೋಣ ಹಾಗೂ 11 ಎತ್ತುಗಳು ಇಕ್ಕಟ್ಟಾದ ವಾಹನದಲ್ಲಿರುವುದನ್ನು ಪೊಲೀಸರು ಗಮನಿಸಿದರು. ತಕ್ಷಣ ಆ ವಾಹನ ನಿಲ್ಲಿಸಿ ಜಾನುವಾರು ಸಾಗಾಟಕ್ಕೆಪಡೆದ ಅನುಮತಿ ಪತ್ರ ಕೋರಿದರು.
ಈ ವೇಳೆ ನೀರು-ಮೇವಿಲ್ಲದೇ ಜಾನುವಾರೊಂದು ವಾಹನದಲ್ಲಿ ಸಾವನಪ್ಪಿರುವುದು ಕಾಣಿಸಿತು. ಎಲ್ಲಾ ಜಾನುವಾರುಗಳನ್ನು ಮಾಂಸಕ್ಕಾಗಿ ಸಾಗಿಸುತ್ತಿರುವುದು ವಿಚಾರಣೆ ವೇಳೆ ಗೊತ್ತಾಯಿತು. ಯಾವುದೇ ದಾಖಲಾತಿಯೂ ಇಲ್ಲದ ಕಾರಣ ಭಟ್ಕಳ ಪೊಲೀಸರು ವಾಹನಸಹಿತ ಜಾನುವಾರುಗಳನ್ನು ವಶಕ್ಕೆಪಡೆದರು. ಆ ಮೂವರನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು.