
ಉತ್ತರ ಕನ್ನಡದಲ್ಲಿ ಕಳಪೆ ಮದ್ಯ ವ್ಯಾಪಕ ವಿಲೇವಾರಿ!
News Details
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಕಳಪೆ ದರ್ಜೆಯ ಮದ್ಯ ಮಾರಾಟವಾಗುತ್ತಿದೆ. ಸೇವನೆಗೆ ಅಯೋಗ್ಯವಾದ ಗೋವಾ ಮದ್ಯದ ಜೊತೆ ಈಚೆಗೆ ಕಮರಿಪೇಟೆಯ ಕಳ್ಳಬಟ್ಟಿ ಸರಾಯಿ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಜಿಲ್ಲೆಯ ಅನೇಕ ಗೂಡಂಗಡಿ, ಡಾಬಾಗಳಲ್ಲಿ ಬೆಳಗ್ಗೆ 5 ಗಂಟೆಯ ವೇಳೆಗೆ ಮದ್ಯ ಮಾರಾಟ ಶುರುವಾಗುತ್ತದೆ. ಕಡಿಮೆ ಬೆಲೆ, ಕಳಪೆ ಗುಣಮಟ್ಟದ ಮದ್ಯ ಸೇವಿಸಿ ಅನೇಕರು ಸಾವನಪ್ಪಿದ್ದಾರೆ. ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬದವರು ನಿರ್ಗತಿಕರಾಗುತ್ತಿದ್ದು, ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಅದಾಗಿಯೂ ಕಳಪೆ ಮದ್ಯದ ವಿರುದ್ಧ ಜನ ಜಾಗೃತರಾಗಿಲ್ಲ!
ಮಾಡಲು ಏನೂ ಕೆಲಸವಿಲ್ಲದಿದ್ದರೂ ಕೆಲವರು ಐಷಾರಾಮಿ ಕಾರುಗಳಲ್ಲಿ ತಿರುಗುತ್ತಾರೆ. ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಾರೆ. ಅಂಥವರ ಆರ್ಥಿಕ ಮೂಲ ಕೆದಕಿದಾಗ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ಮಾಡಿಯೇ ಕೋಟಿ ಕೋಟಿ ದುಡಿದವರು ಇದೀಗ ಸರ್ಕಾರವನ್ನೇ ಅಲ್ಲಾಡಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.
ವಿವಿಧ ಇಲಾಖೆ ಅಧಿಕಾರಿಗಳ ವರ್ಗಾವಣೆ-ಅಲ್ಲಲ್ಲಿ ನಡೆಯುವ ಹೊಡೆದಾಟ ಪ್ರಕರಣಗಳನ್ನು ಸಂದಾನ ಮಾಡಿಸುವಷ್ಟರ ಮಟ್ಟಿಗೆ ಪ್ರಭಾವ ಹೊಂದಿದ್ದಾರೆ. ಸಣ್ಣಪುಟ್ಟ ನೌಕರರನ್ನು ಬೆದರಿಸಿ ಬದುಕು ಕಟ್ಟಿಕೊಂಡ ಪುಡಾರಿಗಳು ಈ ದಂಧೆಯಲ್ಲಿದ್ದಾರೆ. ಹೀಗಾಗಿ ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿಕಟ್ಟಲು ಸಂಬAಧಿಸಿದ ಅಧಿಕಾರಿಗಳಿಂದಲೂ ಸಾಧ್ಯವಾಗುತ್ತಿಲ್ಲ. ಆಗಾಗ ಮಾತ್ರ ಅಲ್ಲಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಸಾವು-ನೋವಿನ ಪ್ರಕರಣಗಳಲ್ಲಿ ಬಹುತೇಕ `ಸರಾಯಿ ಮಹಿಮೆ' ಕಾಣುತ್ತದೆ. ಮದ್ಯದ ನಶೆಯಲ್ಲಿ ಕೌಟುಂಬಿಕ ಕಲಹ, ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆ, ಹೊಡೆದಾಟ ಪ್ರಕರಣಗಳ ವರದಿಯಲ್ಲಿಯೂ ಸರಾಯಿಯ ಕಮಟು ವ್ಯಾಪಿಸಿದೆ. ಪೊಲೀಸ್ ಠಾಣೆಗೆ ಬರುವ ಬಹುತೇಕ ಹೊಡೆದಾಟ-ಬಡಿದಾಟ ಪ್ರಕರಣಗಳು ಸಹ ಅಮಲಿನಲ್ಲಿ ನಡೆದಿರುವುದಾಗಿರುತ್ತದೆ. ಹಲವು ಅಪಘಾತಗಳಿಗೂ ಮದ್ಯ ಸೇವನೆ ಕಾರಣವಾಗಿದ್ದು, ಡ್ರಿಂಕ್ & ಡ್ರೈವ್ ಪ್ರಕರಣಗಳು ಹೆಚ್ಚಾಗಿದೆ. ನಶೆಯ ಗುಂಗಿನಲ್ಲಿ ವಾಹನ ಚಲಾಯಿಸುವ ಕೆಲ ಚಾಲಕರು ತಮ್ಮ ಜೀವದೊಂದಿಗೆ ಇತರೆ ಜೀವಗಳನ್ನು ಪಣಕ್ಕೀಡುತ್ತಿದ್ದಾರೆ. ತಪಾಸಣೆ ವೇಳೆ ಸಿಕ್ಕಿ ಬೀಳುವ ಜನ ಪೊಲೀಸ್ ದಂಡ ಪಾವತಿಸಿ ಮತ್ತೆ ಮದ್ಯದ ನಶೆಯಲ್ಲಿಯೇ ವಾಹನ ಓಡಿಸುತ್ತಾರೆ.
ಮುಖ್ಯವಾಗಿ ಯುವ ಸಮುದಾಯದವರು, ವಿವಿಧ ನೌಕರರಿಯಲ್ಲಿರುವವರು ಹೆಚ್ಚಿನ ಪ್ರಮಾಣದಲ್ಲಿ ಕಳಪೆ ಗುಣಮಟ್ಟದ ಮದ್ಯದ ದಾಸರಾಗಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಸೇರಿ ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ನರಳಾಡುತ್ತಿರುವ ಹಲವು ರೋಗಿಗಳು ಮದ್ಯ ಸೇವನೆಯ ಚಟ ಹೊಂದಿದ್ದಾರೆ. ಮದ್ಯ ಸೇವನೆ ಹಾನಿಕಾರಕ ಎಂದು ವೈದ್ಯರು ಹೇಳಿದರೂ ವ್ಯಸನಕ್ಕೆ ದಾಸರಾದವರು ಅದರಿಂದ ಹೊರಬರದಷ್ಟು ದೂರವುಳಿದಿದ್ದಾರೆ. ನಿತ್ಯ ಸಾವು-ಬದುಕಿನ ನಡುವೆ ಹೊರಳಾಡುವ ವ್ಯಸನಿಗಳು ಕುಟುಂಬದವರನ್ನು ಅನಾಥರನ್ನಾಗಿಸಿ ಜೀವ ಬಿಡುತ್ತಿದ್ದಾರೆ. ಈ ಎಲ್ಲದರ ಬಗ್ಗೆ ಅರಿವಿದ್ದರೂ ಅಕ್ರಮ ಮದ್ಯ ಮಾರಾಟ ತಡೆ ಯಾರಿಂದಲೂ ಸಾಧ್ಯವಾಗಿಲ್ಲ.