
ಹಲಸಿಗಾಗಿ ಮರ ಏರಿದ ಹೆಣ್ಣು ಕರಡಿ ಬಿದ್ದು ಸಾವು; ವಿದ್ಯುತ್ ಸ್ಪರ್ಶದಿಂದ ಆಘಾತ!
News Details
ಹಲಸಿನ ಹಣ್ಣಿಗೆ ಆಸೆಪಟ್ಟು ಮರ ಏರಿದ ಹೆಣ್ಣು ಕರಡಿ ಮರದಿಂದ ಬಿದ್ದು ಸಾವನಪ್ಪಿದೆ. ಮರದ ಪಕ್ಕ ಹಾದುಹೋಗಿದ್ದ ವಿದ್ಯುತ್ ಸ್ಪರ್ಶದಿಂದ ಕರಡಿಗೆ ಆಘಾತವಾಗಿದೆ.
ಜೊಯಿಡಾ-ದಾಂಡೇಲಿ ರಸ್ತೆಯ ಚಾಪೋಲಿಯಲ್ಲಿ ಅನಾಧಿಕಾಲದಿಂದಲೂ ಹಲಸಿನ ಮರವಿದೆ. ರಸ್ತೆ ಪಕ್ಕದಲ್ಲಿಯೇ ಇರುವ ಈ ಮರಕ್ಕೆ ಈ ಬಾರಿ ಅಪಾರ ಪ್ರಮಾಣದಲ್ಲಿ ಹಲಸಿನ ಕಾಯಿ ಬಿಟ್ಟಿದೆ. ಆ ಪೈಕಿ ಕೆಲವು ಹಣ್ಣಾಗಿದ್ದು, ಹಲಸಿನ ಹಣ್ಣಿನ ಕಂಪು ಕಾಡನ್ನು ಆವರಿಸಿದೆ.
ಈ ಕಂಪು ಹುಡುಕಿ ಬಂದ ಕರಡಿ ಶನಿವಾರ ಹಲಸಿನ ಮರ ಏರಿದ್ದು, ಹಲಸಿನ ಹಣ್ಣು ಭಕ್ಷಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿದೆ. ಮರದ ಪಕ್ಕ ಹಾದು ಹೋದ 11ಕೆ ವಿ ವಿದ್ಯುತ್ ತಂತಿಯನ್ನು ಮುಟ್ಟಿದ ಪರಿಣಾಮ ಕರಡಿ ಆಘಾತಕ್ಕೆ ಒಳಗಾಗಿದೆ. ನಂತರ ಕರಡಿ ನೆಲಕ್ಕೆ ಬಿದ್ದು ಹೊರಳಾಡಿದ್ದು, ಅಲ್ಲಿಯೇ ಕೊನೆಉಸಿರೆಳೆದಿದೆ.
ಭಾನುವಾರ ಬೆಳಗ್ಗೆ ಈ ಮಾರ್ಗದಲ್ಲಿ ಸಂಚರಿಸುವ ಜನ ಕರಡಿ ನೋಡಿ ಬೆದರಿದ್ದಾರೆ. ರಸ್ತೆ ಅಂಚಿನಲ್ಲಿ ಕರಡಿ ಮಲಗಿರುವುದನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ನೋಡಿದಾಗ ಕರಡಿ ಸಾವನಪ್ಪಿರುವುದು ಗೊತ್ತಾಗಿದೆ.
ಅಂದಾಜು 18 ವರ್ಷದ ಹೆಣ್ಣು ಕರಡಿ ಇದಾಗಿದ್ದು, ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿರುವ ಬಗ್ಗೆ ಅರಣ್ಯಾಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.