
ಅರಣ್ಯಾಧಿಕಾರಿಗೆ ಚಪ್ಪಲಿ ಹೊಡೆದು ಪರಾರಿಯಾದ ಮರಳುಗಾರ ಅರೆಸ್ಟ್
News Details
ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ತಡೆಯಲು ಬಂದ ಅರಣ್ಯಾಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅದಾದ ನಂತರ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಇಟಗಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ದಂಧೆಕೋರರು ಇಲ್ಲಿನ ಮರಳನ್ನು ಕದ್ದು ಕಾಳಸಂತೆಯಲ್ಲಿ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿಪಡೆದು ಅರಣ್ಯಾಧಿಕಾರಿ ಎಚ್ ಬಿ ಗೌಡರ್ ಸ್ಥಳ ಪರಿಶೀಲನೆ ನಡೆಸಿದರು.
ಆ ವೇಳೆ ರೊಚ್ಚಿಗೆದ್ದ ಕೇಶವ ಮಡಿವಾಳ ಅರಣ್ಯಾಧಿಕಾರಿಗಳನ್ನು ನಿಂದಿಸಿದರು. ಅಕ್ರಮ ಮರಳು ತಡೆಗೆ ಬಂದವರ ವಿರುದ್ಧ ಕಿಡಿಕಾರಿದರು. ಸ್ಥಳಕ್ಕೆ ಬಂದ ಕಾರಣ ಅರಣ್ಯಾಧಿಕಾರಿಯೇ ಕ್ಷಮೆ ಕೋರಬೇಕು ಎಂದು ಕೇಶವ ಮಡಿವಾಳ ಪಟ್ಟುಹಿಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು, ಕೇಶವ ಮಡಿವಾಳ ಅವರು ಎಚ್ ಬಿ ಗೌಡರ್ ಮೇಲೆ ಹಲ್ಲೆ ನಡೆಸಿದರು. ಜೊತೆಗೆ ಕಾಲಿನಲ್ಲಿದ್ದ ಚಪ್ಪಲಿ ಬಿಚ್ಚಿ ಅಧಿಕಾರಿಯ ಕೆನ್ನೆಗೆ ಬಾರಿಸಿದರು.
ಅಲ್ಲಿಯೇ ಇದ್ದ ವ್ಯಕ್ತಿಗಳಿಬ್ಬರು ಈ ಎಲ್ಲಾ ದೃಶ್ಯಾವಳಿಗಳನ್ನು ಚಿತ್ರಿಸುತ್ತಿದ್ದರು. ಆ ಚಿತ್ರಿಕರಣಕ್ಕೂ ಕೇಶವ ಮಡಿವಾಳ ತಡೆ ಒಡ್ಡಿದರು. ವಿಡಿಯೋ ಚಿತ್ರಿಕರಣ ಮಾಡುತ್ತಿದ್ದವರ ಮೇಲೆ ಎರಗಿ ಬಂದು, ಮೊಬೈಲ್ ಕಸಿಯುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆಯವರು ಇನ್ನಷ್ಟು ಸಿಬ್ಬಂದಿ ಕರೆಯಿಸಿಕೊಳ್ಳುವುದಾಗಿ ಹೇಳಿದಾಗ ಕೇಶವ ಮಡಿವಾಳ ಕಲ್ಲು ತೂರಾಟ ನಡೆಸಿ ಪರಾರಿಯಾದರು.
ಸಿದ್ದಾಪುರ ಸಿಪಿಐ ಸೀತಾರಾಮ ಬಿಜಿ ಆರೋಪಿಯ ಬೆನ್ನಟ್ಟಿದರು. ಆಗ ಕೇಶವ ಮಡಿವಾಳ ಸಿಕ್ಕಿಬಿದ್ದರು. ಸದ್ಯ ಕೇಶವ ಮಡಿವಾಳ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯವೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.